ಕೊಡಗಿನ ಅಭಿವೃದ್ಧಿಗೆ ಪೂರಕವಾದ ಬಜೆಟ್ : ಕಾಂಗ್ರೆಸ್ ವಕ್ತಾರ ಸುರೇಶ್ ಅಭಿಮತ

ಮಡಿಕೇರಿ : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16ನೇ ಬಾರಿಗೆ ಮಂಡಿಸಿರುವ ದಾಖಲೆಯ ಬಜೆಟ್ ನಲ್ಲಿ ಭರಪೂರ ಕೊಡುಗೆಗಳನ್ನು ನೀಡಿದ್ದು, ಇವುಗಳು ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್ ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಆಡಳಿತದ ಅನುಭವ ಮತ್ತು ಅರ್ಥ ವ್ಯವಸ್ಥೆಯ ಬಗ್ಗೆ ಅಪಾರ ಜ್ಞಾನ ಹೊಂದಿರುವ ಮುಖ್ಯಮಂತ್ರಿಗಳು ಸರ್ವರಿಗೂ ಸಮಾನ ಆದ್ಯತೆ ನೀಡಿ ಬಜೆಟ್ ಮಂಡಿಸಿದ್ದಾರೆ. ಆದರೆ ಬಿಜೆಪಿ ಮೊಸರನ್ನದಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಆಸ್ಪತ್ರೆಗಳ ಅಭಿವೃದ್ಧಿ, ರಸ್ತೆ, ಸೇತುವೆಗಳ ನಿರ್ಮಾಣ, ವನ್ಯಜೀವಿಗಳ ದಾಳಿಗೆ ಕಡಿವಾಣ, ಪರಿಶಿಷ್ಟರ ಏಳಿಗೆಗೆ ವಿಶೇಷ ಅನುದಾನ, ಕೂಡಿಗೆ ಕ್ರೀಡಾಶಾಲೆಯ ಉನ್ನತಿ, ಮಾದಾಪುರ - ಸೋಮವಾರಪೇಟೆ - ಶನಿವಾರಸಂತೆ - ಕೊಡ್ಲಿಪೇಟೆಯ 95 ಕಿ.ಮೀ ಅಂತರದ ಮಾರ್ಗವನ್ನು ಸರ್ವಋತು ರಸ್ತೆಯಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿರುವುದು ಸೇರಿದಂತೆ ಅನೇಕ ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಕೊಡಗು ಜಿಲ್ಲೆಗೆ ನೀಡಲಾಗಿದ್ದು, ಇದು ಜಿಲ್ಲೆಯ ಇತಿಹಾಸದಲ್ಲೇ ಪ್ರಥಮವಾಗಿದೆ ಎಂದು ಬಣ್ಣಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಡಗು ಜಿಲ್ಲೆಯ ಬಗ್ಗೆ ಅಪಾರ ಕಾಳಜಿ ಇದೆ. ಇದೇ ಕಾರಣದಿಂದ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರ ಮನವಿಗೆ ಸ್ಪಂದಿಸಿ ಬಜೆಟ್ ನಲ್ಲಿ ಅಪಾರ ಕೊಡುಗೆಯನ್ನು ನೀಡಿದ್ದಾರೆ. ವಿರೋಧ ಪಕ್ಷವಾದ ಬಿಜೆಪಿ ಇದನ್ನು ಸ್ವಾಗತಿಸದೆ ರಾಜಕೀಯಕ್ಕಾಗಿ ಟೀಕೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಡಗು ವಿಶ್ವ ವಿದ್ಯಾನಿಲಯವನ್ನು ಮುಚ್ಚುವ ಅಥವಾ ರದ್ದುಪಡಿಸುವ ಕುರಿತು ರಾಜ್ಯ ಸರ್ಕಾರ ಎಲ್ಲೂ ಅಧಿಕೃತ ಆದೇಶ ಹೊರಡಿಸಿಲ್ಲ. ಇದೀಗ ಸೃಷ್ಟಿಯಾಗಿರುವ ಗೊಂದಲವನ್ನು ಸರಿಪಡಿಸಿ ಕೊಡಗು ವಿವಿಯನ್ನು ಜಿಲ್ಲೆಯಲ್ಲೇ ಉಳಿಸಿಕೊಳ್ಳಲು ಇಬ್ಬರು ಶಾಸಕರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ವಿವಿಯನ್ನು ಮುಚ್ಚಲು ಬಿಡುವುದಿಲ್ಲವೆನ್ನುವ ಭರವಸೆಯನ್ನು ಕೂಡ ನೀಡಿದ್ದಾರೆ. ಆದರೆ ವಿವಿ ವಿಚಾರದಲ್ಲಿ ಬಿಜೆಪಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದು, ವಿದ್ಯಾರ್ಥಿಗಳ ಹಾದಿ ತಪ್ಪಿಸುತ್ತಿದೆ ಎಂದು ಟಿ.ಈ.ಸುರೇಶ್ ಆರೋಪಿಸಿದ್ದಾರೆ.
ವಿವಿ ಸಮಸ್ಯೆಯನ್ನು ಬಗೆಹರಿಸಲು ಮತ್ತು ವಿದ್ಯಾರ್ಥಿಗಳ ಹಿತ ಕಾಯಲು ಶಾಸಕರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ವಿರೋಧ ಪಕ್ಷ ಬಿಜೆಪಿ ರಾಜಕೀಯ ಮಾಡುವುದನ್ನು ಬಿಟ್ಟು ಶಾಸಕರುಗಳ ಪ್ರಯತ್ನಕ್ಕೆ ಬೆಂಬಲ ನೀಡಲಿ ಎಂದು ಒತ್ತಾಯಿಸಿದ್ದಾರೆ.