ಮಡಿಕೇರಿ: ಐಟಿ ಅಧಿಕಾರಿಗಳ ಸೋಗಿನಲ್ಲಿ ವೈದ್ಯರ ಮನೆಗೆ ನುಗ್ಗಿದ ಆರೋಪಿಗಳ ಬಂಧನ
ಮಡಿಕೇರಿ: ವೈದ್ಯರೊಬ್ಬರ ಮನೆಗೆ ಆದಾಯ ಇಲಾಖಾ ಅಧಿಕಾರಿಗಳ ಸೋಗಿನಲ್ಲಿ ಬಂದು ಮನೆಯೊಳಗೆ ಹುಡುಕಾಟ ನಡೆಸಿದ ಘಟನೆ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯಲ್ಲಿ ನಡೆದಿದ್ದು, ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಬಿಟ್ಟಂಗಾಲ ಗ್ರಾಮದ ಟೀನಾ ನಂಜಪ್ಪ (37), ಬೇತುವಿನ ಕಾರ್ಯಪ್ಪ (42), ಪೊನ್ನಂಪೇಟೆಯ ನೀತಾ ಮಿಳಿಂದ್ (45) ಹಾಗೂ ದೇವನಹಳ್ಳಿಯ ಹರೀಶ್(33) ಬಂಧಿತ ಆರೋಪಿಗಳು.
ಗುಮ್ಮನಕೊಲ್ಲಿ ನಿವಾಸಿ, ದಂತ ವೈದ್ಯ ಪ್ರವೀಣ್ ದೇವರಗುಂಡ ಅವರ ಮನೆಗೆ ನ.9 ರಂದು ಬೆಳಗ್ಗೆ ಸುಮಾರು 7.30 ಗಂಟೆ ಸಮಯಕ್ಕೆ ಆಗಮಿಸಿದ ಅಪರಿಚಿತ ವ್ಯಕ್ತಿಗಳು, ತಾವು ಆದಾಯ ತೆರಿಗೆ ಅಧಿಕಾರಿಗಳೆಂದು ಹೇಳಿಕೊಂಡಿದ್ದಾರೆ. ನಿಮ್ಮ ಮನೆಗೆ ಆಂಬ್ಯುಲೆನ್ಸ್ ನಲ್ಲಿ 200 ಕೋಟಿ ರೂ. ಹಣ ಬಂದಿರುವ ಬಗ್ಗೆ ಮಾಹಿತಿ ಇದ್ದು, ಮನೆಯನ್ನು ಪರಿಶೀಲನೆ ಮಾಡಬೇಕು ಎಂದು ಹೇಳಿ ಮನೆಯ ಎಲ್ಲಾ ಸದಸ್ಯರನ್ನು ಒಂದು ಕಡೆ ಕುಳಿತುಕೊಳ್ಳುವಂತೆ ಸೂಚಿಸಿದ್ದರು. ನಂತರ ಎಲ್ಲಾ ಮೊಬೈಲ್‍ಗಳನ್ನು ಸ್ವಿಚ್ ಆಫ್ ಮಾಡಿಸಿ ಮನೆಯಲ್ಲಿ ಹುಡುಕಾಟ ನಡೆಸಿದ್ದರು.
ಈ ಬಗ್ಗೆ ದೂರು ಸ್ವೀಕರಿಸಿದ ಪೊಲೀಸರು ತನಿಖೆ ನಡೆಸಿ ಇಂದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರಪೇಟೆ ಉಪವಿಭಾಗದ ಡಿವೈಎಸ್‍ಪಿ ಆರ್.ವಿ ಗಂಗಾಧರಪ್ಪ, ವೃತ್ತ ನಿರೀಕ್ಷಕ ಪ್ರಕಾಶ್ ಬಿ.ಜಿ, ಕುಶಾಲನಗರ ಎಸ್‍ಐ ಗೀತಾ ಮತ್ತು ಕಾಶಿನಾಥ ಬಗಲಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸೂಚನೆ- ಯಾವುದೇ ಅಪರಿಚಿತ ವ್ಯಕ್ತಿಗಳು ಮಾನೆಗೆ ನುಗ್ಗಿ ಇಲಾಖಾ ಅಧಿಕಾರಿಗಳೆಂದು ಮನೆ ಅಥವಾ ಇತರೆ ಸ್ಥಳಗಳ ಪರಿಶೀಲನೆ ನಡೆಸುವುದು ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಇಲ್ಲವೆ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.