ಬೆಳಗಾವಿ ಗಡಿಭಾಗದಲ್ಲಿ ಪುಂಡಾಟಿಕೆ ಮುಂದುವರಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ: ಸಚಿವ ತಂಗಡಗಿ ಎಚ್ಚರಿಕೆ

Update: 2025-02-24 19:45 IST
ಬೆಳಗಾವಿ ಗಡಿಭಾಗದಲ್ಲಿ ಪುಂಡಾಟಿಕೆ ಮುಂದುವರಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ: ಸಚಿವ ತಂಗಡಗಿ ಎಚ್ಚರಿಕೆ

ಶಿವರಾಜ ತಂಗಡಗಿ

  • whatsapp icon

ಕೋಲಾರ : ‘ಬೆಳಗಾವಿ ಗಡಿಭಾಗದಲ್ಲಿ ಪುಂಡಾಟಿಕೆ ಹೀಗೆಯೇ ಮುಂದುವರೆದರೆ ಮುಂದಿನ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್‌.ತಂಗಡಗಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸೋಮವಾರ ರಾಜ್ಯಮಟ್ಟದ ಜನಪರ ಉತ್ಸವ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ನಮ್ಮ ರಾಜ್ಯದ ಪ್ರಮುಖ ಅಂಗ. ಅಲ್ಲೇ ಸುವರ್ಣಸೌಧ ನಿರ್ಮಿಸಿದ್ದೇವೆ. ಬೆಳಗಾವಿಯಲ್ಲಿ ಪುಂಡರ ಹಾವಳಿ ತಪ್ಪಿಸಲು ಮುಖ್ಯಮಂತ್ರಿ ಹಾಗೂ ಜಿಲ್ಲಾಡಳಿತದೊಂದಿಗೆ ಮಾತನಾಡಿದ್ದೇವೆ. ಕಾನೂನು ಸುವವಸ್ಥೆಗೆ ಧಕ್ಕೆ ಉಂಟು ಮಾಡುವ ಪುಂಡರನ್ನು ಸುಮ್ಮನೇ ಬಿಡುವುದಿಲ್ಲ’ ಎಂದರು.

ಮುಖ್ಯಮಂತ್ರಿ ಸ್ಥಾನ ಇರುವುದೇ ದಾಖಲೆ ಮುರಿಯಲು ಎಂದಿರುವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದು ದಾಖಲೆ ಮುರಿಯಲು ಅಲ್ಲ. ರಾಜ್ಯ ಅಭಿವೃದ್ಧಿಗಾಗಿ ಅವರು ಶ್ರಮಿಸುತ್ತಿದ್ದಾರೆ’ ಎಂದು ಹೇಳಿದರು.

‘ಎಸ್‌.ಸಿ.ಪಿ, ಟಿಎಸ್‌ಪಿ ಯೋಜನೆ ತಂದಿದ್ದು ಯಾರು ಎಂಬ ಪ್ರಶ್ನೆಯನ್ನು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಬಳಿ ಕೇಳಿ. ಅವರಿಗೆ ತಾಕತ್ತು ಇದ್ದರೆ, ಪರಿಶಿಷ್ಟರ ಬಗ್ಗೆ ಕಾಳಜಿ ಇದ್ದರೆ ದೇಶದಾದ್ಯಂತ ಏಕೆ ಜಾರಿ ಮಾಡಬಾರದು? ಪ್ರಧಾನಿ ಮೋದಿ ಅವರಿಗೆ ಹೋಗಿ ಹೇಳಲಿ. ಬಜೆಟ್‌ನಲ್ಲಿ ಶೇ 24.1ರಷ್ಟು ಅನುದಾನ ಮೀಸಲಿಡಲಿ ನೋಡೋಣ’ ಎಂದು ಸವಾಲು ಹಾಕಿದರು.

‘ಈ ತಾಕತ್ತು ಬಿಜೆಪಿಯವರಿಗೆ ಎಲ್ಲಿದೆ? ಹಿಂದೆ ಪರಿಶಿಷ್ಟರಿಗೆ ಕೇವಲ 3 ಸಾವಿರ ಕೋಟಿ ರೂ. ಅನುದಾನ ತೆಗೆದಿರಿಸುತ್ತಿದ್ದರು. ನಮ್ಮ ಸರ್ಕಾರ ಈಗ 35 ಸಾವಿರ ಕೋಟಿ ರೂ. ಅನುದಾನ ನಿಗದಿಪಡಿಸಿದೆ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News