ಕೋಲಾರ: ಫೆ. 23 ರಂದು "ನಮ್ಮ ಕೊಮ್ಮಣ್ಣ ನಮ್ಮ ಚರಿತ್ರೆ" ನುಡಿ ನಮನ ಕಾರ್ಯಕ್ರಮ

ಕೋಲಾರ, : ಫೆ. 23 ರಂದು "ನಮ್ಮ ಕೊಮ್ಮಣ್ಣ ನಮ್ಮ ಚರಿತ್ರೆ" ನುಡಿ ನಮನ ಕಾರ್ಯಕ್ರಮ ನಡೆಯಲಿದೆ ಎಂದು ಹಿರಿಯ ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಆದಿಮ ಸಾಂಸ್ಕೃತಿಕ ಕೇಂದ್ರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ದಲಿತ ಚಳುವಳಿಯ ಹಿರಿಯ ಹೋರಾಟಗಾರ ಹಾಗೂ ಶಿಕ್ಷಕ ದಿವಂಗತ ಕೆ.ಎಂ.ಕೊಮ್ಮಣ್ಣ ಒಬ್ಬ ಸಾಮಾಜಿಕ ಶಿಕ್ಷಕರಾಗಿದ್ದರು. ಕೊಮ್ಮಣ್ಣನ ಸಮಷ್ಟಿ ಪ್ರಜ್ಞೆ ಮುಂದಿನ ಸಮುದಾಯಗಳ ಉಳಿವಿಗಾಗಿರುವ ಸವಾಲುಗಳನ್ನು ಸಾಂಸ್ಕೃತಿಕವಾಗಿ ಸರಿದಾರಿಯಲ್ಲಿ ನಡೆಸುವ ತಾತ್ವಿಕತೆಯ ದಾರಿಯನ್ನು ತೋರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎನ್.ವೆಂಕಟೇಶ್ ಮಾತನಾಡಿ, ದಿವಂಗತ ಕೊಮ್ಮಣ್ಣ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದಲಿತ ಚಳುವಳಿಯಲ್ಲಿ ಮೂರು ದಶಕಗಳ ಕಾಲ ಮೌನ ಕ್ರಾಂತಿ ಮಾಡಿದವರು. ಅವರು ಶಿಸ್ತು ಮತ್ತು ಬದ್ಧತೆಯನ್ನು ಮೈಗೂಡಿಸಿಕೊಂಡಿದ್ದ ವ್ಯಕ್ತಿತ್ವ ಹೊಂದಿದವರು. ದಲಿತ ಚಳುವಳಿಯಲ್ಲಿ ಅವರ ಹೆಜ್ಜೆ ಗುರುತುಗಳನ್ನು ಪರಿಚಯಿಸುವ, ಚಳುವಳಿಯ ಕಣ್ಣುಗಳು ಕಂಡಂತೆ ಕೊಮ್ಮಣ್ಣನವರ ಕುರಿತು ಒಂದು ಪುಸ್ತಕವನ್ನು ಏಪ್ರಿಲ್ 14 ರಂದು ನಡೆಯಲಿರುವ ದಲಿತ ಚಳುವಳಿಯ ಪುನಶ್ಚೇತನ ಸಮಾವೇಶದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಆದಿಮ ಸಾಂಸ್ಕೃತಿಕ ಕೇಂದ್ರ ಅಧ್ಯಕ್ಷ ಎನ್. ಮುನಿಸ್ವಾಮಿ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಹೋರಾಟಕ್ಕೆ ಪ್ರವೇಶ ಮಾಡಿದ ಕೊಮ್ಮಣ್ಣ, ಅವಿಭಜಿತ ಕೋಲಾರ ಜಿಲ್ಲೆಯ ಗೌರಿಬಿದನೂರು ನಾಗಸಂದ್ರ ಭೂಮಿ ಹೋರಾಟದ ಚಾರಿತ್ರಿಕ ಚಳುವಳಿಯನ್ನು ಮೌನವಾಗಿ ಕಟ್ಟಿದವರು. ಆದಿಮ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕೊಮ್ಮಣ್ಣ ನೇರನುಡಿ, ದಕ್ಷತೆಯಿಂದ ಪ್ರಾಮಾಣಿಕವಾಗಿ ಬದುಕಿದವರು ಎಂದು ಸ್ಮರಿಸಿದರು.
ಫೆ.23 ರಂದು ತಾಲೂಕಿನ ತೆರಹಳ್ಳಿ ಬೆಟ್ಟದ ಶಿವಗಂಗೆ ಆದಿಮ ಸಾಂಸತಿಕ ಕೇಂದ್ರದಲ್ಲಿ "ನಮ್ಮ ಕೊಮ್ಮಣ್ಣ ನಮ್ಮ ಚರಿತ್ರೆ" ನುಡಿ ನಮನ ಕಾರ್ಯಕ್ರಮವನ್ನು ಮಧ್ಯಾಹ್ನ 2 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಆದಿಮ ಅಧ್ಯಕ್ಷ ಎಸ್.ಮುನಿಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ಆದಿಮ ಕೇಂದ್ರದ ಕಾರ್ಯದರ್ಶಿ ಹ.ಮಾ.ರಾಮಚಂದ್ರ ವಿಚಾರ ಮಂಡನೆ ಮಾಡಲಿದ್ದು, ಮುಖಂಡ ಸಿ.ಎಂ.ಮುನಿಯಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿವೃತ್ತ ಸಂರಕ್ಷಣಾಧಿಕಾರಿ ವೆಂಕಟನಾರಾಯಣಮ್ಮ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಂಜೆ 5ಕ್ಕೆ ನಮ್ಮ ಚರಿತ್ರೆ ಭವಿಷ್ಯದ ಹೆಜ್ಜೆಗಳು ಕುರಿತು ವಿಚಾರ ಗೋಷ್ಠಿನಡೆಯಲಿದ್ದು, ಸಂಜೆ 7ಕ್ಕೆ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ರಚಿಸಿರುವ ಕಲ್ ಕಮಲ್ ಕಲೇ ಪರಾಕ್ ನಾಟಕ ಪ್ರದರ್ಶನವು ಬುಡ್ಡೀದಿಪ ಬಡಮಾಕನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ತಂಡದಿಂದ ನಡೆಯಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆದಿಮ ಕಾರ್ಯದರ್ಶಿ ಹ.ಮಾ.ರಾಮಚಂದ್ರ, ಮುಖಂಡರಾದ ಎಂ. ಮಾರ್ಕೊಂಡಯ್ಯ. ದಸಂಸ ಜಿಲ್ಲಾ ಸಂಚಾಲಕ ಹಾರೋಹಳ್ಳಿ ರವಿ ಉಪಸ್ಥಿತರಿದ್ದರು.