ಸಚಿವರ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗಿಲ್ಲ : ಎನ್.ಎಸ್.ಬೋಸರಾಜು
ಕುಕನೂರು : ಗುತ್ತಿಗೆದಾರ ಪಂಚಾಳ್ ಅವರ ಸಾವಿಗೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಬಾಣಂತಿಯರ ಸಾವಿಗೆ ಸಂಬಂಧಿಸಿದಂತೆ ದಿನೇಶ್ ಗುಂಡೂರಾವ್ ಅವರ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿ ಪಕ್ಷದವರಿಗೆ ಇಲ್ಲ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.
ಬಾನಾಪುರದಲ್ಲಿ ನಿರ್ಮಾಣವಾಗುತ್ತಿರುವ ಜಾಕ್ವೆಲ್ ಪಂಪ್ ಹೌಸ್ ಗೆ ಭೇಟಿಕೊಟ್ಟು ಪರಿಶೀಲನೆ ಮಾಡಿದ ನಂತರ ಸುದ್ದಿಗರರೊಂದಿಗೆ ಮಾತನಾಡಿದ ಸಚಿವರು, ಬಿಜೆಪಿ ಪಕ್ಷದ 16 ಜನ ಘಟಾನುಗಟಿ ನಾಯಕರ ಮೇಲೆಯೇ ಕೇಸುಗಳಿವೆ. ಯಡಿಯೂರಪ್ಪ, ಆರ್.ಅಶೋಕ್, ಶೋಭಾ ಕರಂದ್ಲಾಜೆ, ಬಿ.ವೈ.ವಿಜಯೇಂದ್ರ ಹೀಗೆ ಬಿಜೆಪಿ ಪಟ್ಟಿ ಬೆಳೆಯುತ್ತದೆ. ಮೊದಲು ಅವರು ರಾಜೀನಾಮೆ ಕೊಡಲಿ ಎಂದು ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಮೂರು ವರ್ಷಕ್ಕೆ ಒಂದು ಸಲ ಬಸ್ ಪ್ರಯಾಣ ದರ ಏರಿಸಲು ಅವಕಾಶವಿದೆ. ಹೀಗಾಗಿ ಪ್ರಯಾಣಿಕರ ಬಸ್ ದರ ಹೆಚ್ಚಿಸಲಾಗಿದೆ ಎಂದು ಸಮರ್ಥಿಸಿಕೊಂಡ ಸಚಿವರು, ಗ್ಯಾರಂಟಿ ಯೋಜನೆ ಅನುಷ್ಠಾನ ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಯಲ್ಲಿದೆ ಎಂದರು.
ತುಂಗಭದ್ರಾ ನದಿ ಸೇರಿದಂತೆ ರಾಜ್ಯದ ನದಿಗಳ ಹೂಳು ತೆಗಿಸುವ ಪ್ರಮೇಯವೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದು, ಸ್ಥಳೀಯ ಬನಾಪುರ ಜಾಕ್ವೆಲ್ ಪಂಪ್ ಹೌಸ್ ಯೋಜನೆಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದರಿಂದ ಸ್ಥಳೀಯ 9 ಕೆರೆಗಳಿಗೆ ನೀರು ತುಂಬಿಸಿ ರೈತರ ಜಮೀನುಗಳಿಗೆ ಅಂತರ್ ಜಲ ವೃದ್ಧಿಯಾಗಲಿದೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಯಂಕಣ್ಣ ಯಾರಾಶಿ, ಕೆರಿಬಸಪ್ಪ ನಿಡಗುಂದಿ, ಸಂಗಮೇಶ್ ಗುತ್ತಿ, ಇತರ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.