ಸರ್ಕಾರ ಸರಿಯಾಗಿ ವಾದ ಮಾಡಿದರೆ ಯಡಿಯೂರಪ್ಪ ಜೈಲಿಗೆ ಹೋಗುತ್ತಾರೆ: ಶಾಸಕ ಯತ್ನಾಳ್

ಕೊಪ್ಪಳ: ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಸರಿಯಾಗಿ ವಾದ ಮಾಡಿದರೆ ಯಡಿಯುರಪ್ಪ ಪೋಕ್ಸೊ ಪ್ರಕರಣದಲ್ಲಿ ಜೈಲಿಗೆ ಹೋಗುತ್ತಾರೆ ಎಂದು ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಇಂದು ( ಸೋಮವಾರ) ಕೊಪ್ಪಳದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, "ಬಿಜೆಪಿ ಹಿಂದೂಗಳ ಪರವಾಗಿ ಇಲ್ಲ, ಎಲ್ಲರೂ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಏಕೆಂದರೆ ಯಡಿಯೂರಪ್ಪ ಮತ್ತು ಅವರ ಪುತ್ರನ ಸಾಕಷ್ಟು ಹಗರಣಗಳು ಇವೆ. ಸಾವಿರಾರು ರುಪಾಯಿಗಳನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ನಾನು ಇಡೀ ರಾಜ್ಯದಲ್ಲಿ ಸಂಚಾರ ಮಾಡಿ ಜನರ ಅಭಿಪ್ರಾಯವನ್ನು ಸಂಗ್ರಹ ಮಾಡುತ್ತೇನೆ. ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳು ಆಗುತ್ತಿಲ್ಲ. ಬರೀ ಗ್ಯಾರಂಟಿಯಿಂದ ಜನರಿಗೆ ಏನು ಅಗುವುದಿಲ್ಲ ಎಂದರು.
‘ವೀರಶೈವ ಲಿಂಗಾಯತರಿಗೆ ಮೀಸಲಾತಿ ತಪ್ಪಿಸಿದ್ದೇ ಅಪ್ಪ-ಮಗ. ನಮ್ಮನ್ನು ಜೈಲಿಗೆ ಹಾಕಿಸಲು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರುವ ಲಿಂಗಾಯತ ಐಪಿಎಸ್ ಅಧಿಕಾರಿಯೊಬ್ಬರನ್ನು ವಿಜಯೇಂದ್ರ ನಮ್ಮ ಬಳಿ ಕಳುಹಿಸಿದ್ದ’ ಎಂದು ಆರೋಪಿಸಿದರು.
ವಾಲ್ಮೀಕಿ ಸಮುದಾಯದ ರಮೇಶ್ ಜಾರಕಿಹೊಳಿಯನ್ನು ಬಲಿಪಶುಮಾಡಲಾಯಿತು. ಜಾರಕಿಹೊಳಿ ಪ್ರಕರಣದಲ್ಲಿ ವಿಜಯೇಂದ್ರ ಕೈವಾಡವಿದೆ. ಜಾರಕಿಹೊಳಿ ನೀರಾವರಿ ಸಚಿವರಾದಾಗ ಹಣ ಕೊಳ್ಳೆ ಹೊಡೆಯಲು ವಿಜಯೇಂದ್ರಗೆ ಅವಕಾಶ ಸಿಗಲಿಲ್ಲ. ವಿಜಯೇಂದ್ರ ಎಲ್ಲ ಕೆಟ್ಟ ಕೆಲಸಗಳನ್ನು ಮಾಡಿ ಆ ವಿಡಿಯೊಗಳನ್ನು ಐಪಿಎಸ್ ಅಧಿಕಾರಿ ಮೂಲಕ ಡಿಲೀಟ್ ಮಾಡಿಸಿದ್ದಾನೆ ಎಂದು ಆರೋಪಿಸಿದರು.
ಮಾದ್ಯಮಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಯತ್ನಾಳ್:
ಕಾಂಗ್ರೆಸ್ ಅಥವಾ ಬೇರೆ ಪಕ್ಷಗಳಿಗೆ ಹೋಗುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ ‘ಕಾಂಗ್ರೆಸ್ ಮುಸ್ಲಿಮರ ಪಕ್ಷ. ಅಲ್ಲಿಗೆ ಈ ಜನ್ಮದಲ್ಲಿಯೂ ಹೋಗುವುದಿಲ್ಲ. ಮುಂದಿನ ಜನ್ಮವೂ ಹೋಗುವುದಿಲ್ಲ. ಈ ಕುರಿತು ಸಾಕಷ್ಟು ಅಪಪ್ರಚಾರ ನಡೆಯುತ್ತಿದೆ. ಬಿ.ವೈ. ವಿಜಯೇಂದ್ರನ ನಕಲಿ ಸಾಮಾಜಿಕ ತಾಣಗಳು ಇವೆ. ಅದರಲ್ಲಿ ಸುದ್ದಿಗಳನ್ನು ಹಾಕಲಾಗುತ್ತಿದ್ದು ಕೆಲವು ಮಾಧ್ಯಮದವರು ಕೂಡ ವಿಜಯೇಂದ್ರ ಹಾಗೂ ಯಡಿಯೂರಪ್ಪಗೆ ಬೆಂಬಲವಾಗಿ ನಿಂತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ಜೊತೆಯಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಕುಮಾರ ಬಂಗಾರಪ್ಪ ಈಗಲೂ ಇದ್ದಾರೆಯೇ ಎಂಬ ಮಾದ್ಯಮದವರ ಪ್ರಶ್ನೆಗೆ ‘ಅವರು ಯಾವಾಗಲೂ ನನ್ನ ಜೊತೆಗೆ ಇರುತ್ತಾರೆ. ಇದರ ಬಗ್ಗೆ ಇತ್ತೀಚೆಗಷ್ಟೇ ಉತ್ತರ ಕೊಟ್ಟಿದ್ದೇನೆ. ಇಂಥ ಪ್ರಶ್ನೆ ಕೇಳಲು ವಿಜಯೇಂದ್ರ ನಿಮಗೆ ಹೇಳಿದ್ದನಾ? ವಿಜಯೇಂದ್ರ ವ್ಯಾಟ್ಸ್ ಆಪ್‌ನಲ್ಲಿ ಕಳಿಸುವ ಪ್ರಶ್ನೆಯನ್ನು ಕೇಳುತ್ತೀರಾ?’ ಎಂದರು. ನೀವು ಜೋರು ಮಾತನಾಡುವುದಾದರೆ ‘ಗೆಟ್ ಔಟ್’ ಎಂದು ಆಕ್ರೋಶ ವ್ಯಕ್ತಪಡಿಸಿದರು ನಂತರ ಮಾಧ್ಯಮ ಪ್ರತಿನಿಧಿಗಳು ಹಾಗೂ ಯತ್ನಾಳ ನಡುವೆ ಜಟಾಪಟಿ ನಡೆಯಿತು.