ಕೊಪ್ಪಳ ರಾಘವೇಂದ್ರ ಮಠದ ಆಸ್ತಿ ವಿವಾದ ಮತ್ತೆ ಮುನ್ನಲೆಗೆ : ಮಂತ್ರಾಲಯ ಮಠದ ಪೀಠಾಧಿಪತಿಗಳ ವಿರುದ್ಧ ಪ್ರತಿಭಟನೆ

Update: 2025-03-27 11:42 IST
Photo of Protest
  • whatsapp icon

ಕೊಪ್ಪಳ : ಕೊಪ್ಪಳ ರಾಘವೇಂದ್ರ ಮಠದ ಆಸ್ತಿ ವಿವಾದ ಮತ್ತೆ ಮುನ್ನಲೆಗೆ ಬಂದಿದ್ದು, ‘ಕೊಪ್ಪಳದ ರಾಯರ ಮಠ ಮಂತ್ರಾಲಯದ ಪೀಠಕ್ಕೆ ಸೇರಿದ್ದು, ಎಂಬ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ಶ್ರೀಗಳ ಹೇಳಿಕೆಯನ್ನು ಖಂಡಿಸಿ ಬುಧವಾರ ಮಧ್ಯರಾತ್ರಿ ಕೊಪ್ಪಳದ ರಾಯರ ಮಠದ ಭಕ್ತರು ಪ್ರತಿಭಟನೆ ನಡೆಸಿದ್ದಾರೆ.

ರಾಯರ ಮಠದಲ್ಲಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಂತ್ರಾಲಯದ ರಾಯರ ಮಠದ ಸುಬುಧೇಂದ್ರ ಶ್ರೀಗಳು ಬುಧವಾರ ರಾತ್ರಿ ನಗರಕ್ಕೆ ಆಗಮಿಸಿದ್ದರು. ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡುವಾಗ, ‘ಕೊಪ್ಪಳದ ರಾಯರ ಮಠ ಮಂತ್ರಾಲಯದ ಪೀಠಕ್ಕೆ ಸೇರಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ. ಮಠಕ್ಕೆ ನೂತನವಾಗಿ ಟ್ರಸ್ಟ್ ರಚನೆ ಮಾಡಬೇಕು. ಟ್ರಸ್ಟ್ ಸಮಿತಿಯಲ್ಲಿ ಯಾರು ಇರಬೇಕು ಎನ್ನುವ ಪಟ್ಟಿಯನ್ನು ನೀಡಿ. ಅದರಲ್ಲಿ ಟ್ರಸ್ಟ್ ಸಮಿತಿಯಲ್ಲಿ ಯಾರು ಇರಬೇಕು ಎಂಬ ಬಗ್ಗೆ ತೀರ್ಮಾನಿಸುತ್ತೇವೆ. ಮಠವು ಶಿಥಿಲಗೊಂಡಿದ್ದು, ನಾವು ಹಣ ನೀಡಿ ಅಭಿವೃದ್ಧಿ ಪಡಿಸುತ್ತೇವೆ ಎಂದು ತಿಳಿಸಿದ್ದರು.

ಸುಬುಧೇಂದ್ರ ತೀರ್ಥರ ಈ ಹೇಳಿಕೆಯನ್ನು ವಿಪ್ರರು ಖಂಡಿಸಿದ್ದು, ಕೊಪ್ಪಳದ ರಾಯರ ಮಠದ ವಿವಾದವು ರಾತ್ರೋ ರಾತ್ರಿ ಭುಗಿಲೆದಿದೆ. ಕೊಪ್ಪಳದ ರಾಘವೇಂದ್ರ ಮಠವನ್ನು ಮಂತ್ರಾಲಯದ ಮಠದ ಸುರ್ಪದಿಗೆ ಹಂತ ಹಂತವಾಗಿ ಪಡೆಯಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ, ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿಪ್ರರು ಶ್ರೀಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಮಾಧ್ಯಮದವರ ಜತೆ ಮಾತನಾಡಿದ ಮಂತ್ರಾಲಯದ ರಾಯರ ಮಠದ ಸುಬುಧೇಂದ್ರ ತೀರ್ಥರು, ನಾನೂ ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ. 1971ರಲ್ಲಿ ಮಂತ್ರಾಲಯದ ರಾಯರ ಮಠಕ್ಕೆ ಕೊಪ್ಪಳದ ರಾಘವೇಂದ್ರ ಮಠವನ್ನು ಸುಪರ್ದಿಗೆ ಕೊಟ್ಟ ದಾಖಲೆಗಳಿವೆ ಎಂದು ಹೇಳಿದರು.

ಗುರುವಾರ ಸಂಜೆಯವರೆಗೆ ನಡೆಯಬೇಕಿದ್ದ ಎಲ್ಲ ಕಾರ್ಯಕ್ರಮಗಳನ್ನು ಸುಬುಧೇಂದ್ರ ತೀರ್ಥರು ರದ್ದುಗೊಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News