ಕೊಪ್ಪಳ | ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ಪ್ರಕರಣ ಹಿನ್ನೆಲೆ: ಪ್ರವಾಸಿಗರಿಗಾಗಿ ಸಹಾಯವಾಣಿ ಆರಂಭ

ಕೊಪ್ಪಳ : ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ಒಬ್ಬನನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಪ್ರಕರಣಗಳು ಮರುಕಳಿಸದಂತೆ ಮತ್ತು ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಮಾಹಿತಿ, ಸುರಕ್ಷತೆ ಹಾಗೂ ಭದ್ರತೆಯ ಹಿತದೃಷ್ಟಿಯಿಂದ ಪ್ರವಾಸಿ ಮಾಹಿತಿ ಕೇಂದ್ರ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಕೊಪ್ಪಳ ಜಿಲ್ಲೆಯು ಐತಿಹಾಸಿಕ ಪ್ರೇಕ್ಷಣಿಯ ಸ್ಥಳಗಳನ್ನು ಹೊಂದಿರುವ ಜಿಲ್ಲೆಯಾಗಿದ್ದು, ದೇಶ ಹಾಗೂ ವಿದೇಶದಿಂದ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಸದರಿ ಪ್ರವಾಸಕ್ಕೆ ಆಗಮಿಸುವ ಪ್ರವಾಸಿಗರಿಗೆ ಮಾಹಿತಿ, ಸುರಕ್ಷತೆ, ಜಾಗೃತಿ ಕಲ್ಪಿಸುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಒಂದು ಪ್ರವಾಸಿ ಮಾಹಿತಿ ಕೇಂದ್ರವನ್ನು (ಸಹಾಯವಾಣಿ) ಇಂದಿನಿಂದ (ದಿನಾಂಕ:11/03/2025) ಆರಂಭಿಸಲಾಗಿದೆ.
ಈ ಮಾಹಿತಿ ಕೇಂದ್ರದಲ್ಲಿ ಆರೋಗ್ಯ, ಪೊಲೀಸ್, ಅಗ್ನಿಶಾಮಕ, ಅರಣ್ಯ, ಅಬಕಾರಿ, ಪ್ರವಾಸೋದ್ಯಮ, ಪುರಾತತ್ವ ಇಲಾಖೆಯ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಆರೋಗ್ಯ, ಪ್ರವಾಸಿ ತಾಣ, ಅಪರಾದ, ವಿಪತ್ತುಗಳಂತಹ ಇತರ ಅವಶ್ಯಕ ಮತ್ತು ತುರ್ತು ಸಂದರ್ಭದಲ್ಲಿ ನಿಖರವಾದ ಮತ್ತು ಸೂಕ್ತ ಮಾಹಿತಿಯನ್ನು ಒದಗಿಸುವ ಹಿತದೃಷ್ಟಿಯಿಂದ ವಿವಿಧ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದ್ದು, ಸದರಿ ಅಧಿಕಾರಿ/ಸಿಬ್ಬಂದಿ ವರ್ಗದವರು ಪ್ರತಿದಿನ ಬೆಳಗ್ಗೆ 8:00 ಗಂಟೆಯಿಂದ ರಾತ್ರಿ 8:00 ವರೆಗೆ ಸಹಾಯವಾಣಿ ಕೇಂದ್ರದಲ್ಲಿ ಕರ್ತವ್ಯವನ್ನು ನಿರ್ವಹಿಸುವರು.
ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ತಮಗೆ ಬೇಕಾದ ಅಗತ್ಯ ಸಲಹೆ ಹಾಗೂ ಮಾಹಿತಿಯನ್ನು ಪಡೆಯಲು ಈ ಕೆಳಕಾಣಿಸಿದ ಸಹಾಯವಾಣಿಗೆ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಅವರ ಪತ್ರಿಕಾ ಪ್ರಟಣೆಯಲ್ಲಿ ತಿಳಿಸಿದ್ದಾರೆ.
ಸಹಾಯವಾಣಿ ಸಂಖ್ಯೆ : 08539-225311