ಕೊಪ್ಪಳಕ್ಕೆ ಒಂದಲ್ಲ ಮೂರು ಕಾರ್ಖಾನೆ

ಸಾಂದರ್ಭಿಕ ಚಿತ್ರ PC | Grok
ಕೊಪ್ಪಳ: ಕೊಪ್ಪಳದ ಸಮೀಪದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಬಿ ಎಸ್ ಪಿ ಎಲ್ ಕಾರ್ಖಾನೆಗೆ ಈಗಾಗಲೇ ತೀವ್ರ ವಿರೋಧ ವಾಗುತಿದ್ದು,ಈಗ ಮತ್ತೊಂದು ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಕೊಪ್ಪಳ ಜಿಲ್ಲೆಗೆ ಬಿ ಎಸ್ ಪಿ ಎಲ್ ಕಾರ್ಖಾನೆ ಒಂದೇ ಅಲ್ಲ ಇದರ ಜೊತೆಗೆ ಮೂರು ಕಾರ್ಖಾನೆಗಳು ಬರಲಿವೆ ಎಂಬ ಆರೋಪ ಕೇಳಿ ಬಂದಿದೆ.
ಕೊಪ್ಪಳದ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಅವರು ಪರಿಷತ್ ನಲ್ಲಿ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು, ಬಿಎಸ್‌ಪಿಎಲ್ ಜೊತೆ- 54 ಸಾವಿರ ಕೋಟಿ ರೂ., ಕಿರ್ಲೋಸ್ಕರ್ - ಮೂರು ಸಾವಿರ ಕೋಟಿ ರೂ. ಮತ್ತು ಸೆರೆನಾಟಿಕ ರಿನಿವೇಬಲ್ ಇಂಡಿಯಾ ಎಂಬ ಕಾರ್ಖಾನೆಯ ಜೊತೆ 43,975 ಕೋಟಿ ರೂ. ಹೂಡಿಕೆಯ ಒಪ್ಪಂದವನ್ನು ಇನ್ವೆಸ್ಟ್ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಮಾಡಿಕೊಂಡಿದೆ. ಇದರಿಂದ ಜಿಲ್ಲೆಯ ಜನರನ್ನು ಆತಂಕಕ್ಕೆ ತಳ್ಳಿದಂತಾಗಿದೆ.
ಸದ್ಯ ಈಗಿರುವ ಕಾರ್ಖಾನೆಗಳಿಂದ ಜನರ ಬದುಕು ಜರ್ಜರಿತವಾಗಿದೆ. ಸದ್ಯ ಈ ಒಂದು ಕಾರ್ಖಾನೆಗೆ ಸಾಕಷ್ಟು ವಿರೋಧದ ನಡುವೆ ಮತ್ತೆರಡು ಕಾರ್ಖಾನೆಗಳ ಜೊತೆಗೆ ಸರ್ಕಾರ ಮಾಡಿಕೊಂಡಿರುವ ಒಪ್ಪಂದದ ಬಗ್ಗೆ ಜನಪ್ರತಿನಿಧಿಗಳಿಗೆ ತಿಳಿದಿರಲಿಲ್ಲವೇ? ಜನಪ್ರತಿನಿಧಿಗಳು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಶಾಸಕರು ಮತ್ತು ಸಂಸದರು ಹೋರಾಟದಲ್ಲಿ ಭಾಗಿಯಾಗಿದ್ದರು. ಈ ವಿಷಯದ ಬಗ್ಗೆ ಅವರಿಗೆ ಮೊದಲೇ ತಿಳಿದಿರಲಿಲ್ಲವೇ ? ತಿಳಿದಿದ್ದರೂ ಅವರು ಯಾಕೆ ಹೇಳಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ.
ಜಿಲ್ಲೆಯ ಜನಪ್ರತಿನಿಧಿಗಳ ಸರ್ವ ಪಕ್ಷ ನಿಯೋಗವು ಮುಖ್ಯಮಂತ್ರಿಗಳ ಬಳಿ ಹೋಗಿ ಕಾರ್ಖಾನೆ ವಿಸ್ತರಣೆಯನ್ನು ತಡೆಯವಂತೆ ಮನವಿ ಮಾಡಿತ್ತು, ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಕಾರ್ಖಾನೆ ವಿಸ್ತರಣೆಯ ಕಾರ್ಯವನ್ನು ಸ್ಥಗಿತಗೊಳಿಸಿ, ವರದಿ ನೀಡುವಂತೆ ಸರ್ಕಾರದ ಕಾರ್ಯದರ್ಶಿ ಮತ್ತು ಜಿಲ್ಲೆಯ ಅಧಿಕಾರಿಗಳಿಗೆ ಸೂಚಿಸಿದ್ದರು.