ರಮೇಶ್ ಜಾರಕಿಹೊಳಿ ಬಿಎಸ್‌ವೈ ಅವರ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು : ವಿಜಯೇಂದ್ರ
Update: 2025-01-15 15:15 GMT
ಕೊಪ್ಪಳ: ‘ಯಡಿಯೂರಪ್ಪ ಅವರು ರಾಜ್ಯದ ಹಳ್ಳಿ-ಹಳ್ಳಿಗಳಿಗೆ ಹೋಗಿ ಪಕ್ಷವನ್ನು ಕಟ್ಟಿದ್ದಾರೆ. ಇತ್ತೀಗಷ್ಟೇ ಪಕ್ಷಕ್ಕೆ ಸೇರಿರುವ ರಮೇಶ್ ಜಾರಕಿಯೊಳಿ ಅವರು ಯಡಿಯೂರಪ್ಪ ಅವರ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು. ಅವರಿಗೆ ಸಮಸ್ಯೆ ಇದ್ದರೆ ಹೈಕಮಾಂಡ್ ಜೊತೆ ಮಾತನಾಡಲಿ. ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ʼಕಾಂಗ್ರೆಸ್‌ನಲ್ಲಿ ಬಣ ರಾಜಾಕೀಯ ಹೆಚ್ಚಿದೆ. ಸಿದ್ದರಾಮಯ್ಯ ನವರು ರಾಜೀನಾಮೆ ಕೊಡುವ ಕಾಲ ಕೂಡ ಬಂದಿದೆ. ಇದನ್ನು ಹೇಳಿದರೆ ಸಿದ್ದರಾಮಯ್ಯ, ಭವಿಷ್ಯ ನುಡಿಯುತ್ತಾರಾ ಅಂತ ಕೇಳ್ತಾರೆ. ನಮಗೆ ಸಿದ್ದರಾಮಯ್ಯನವರ ಮೇಲೆ ಯಾವುದೇ ದ್ವೇಷ ಇಲ್ಲʼ ಎಂದರು.
ʼಭ್ರಷ್ಟ ಕಾಂಗ್ರೆಸ್ ಸರಕಾರಕ್ಕೆ ನಾಡಿನ ಜನ ಹಿಡಿ ಶಾಪ ಹಾಕುತಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದು ದರಿದ್ರ ಸರಕಾರ, ಈ ಭಾವನೆ ಆಡಳಿತ ಪಕ್ಷದ ಶಾಸಕರಿಗೂ ಕೂಡಾ ಇದೆʼ ಎಂದರು.