ಮೋದಿಯವರು ಡೀಸೆಲ್ ಬೆಲೆ ಏರಿಕೆ ಮಾಡಿದನ್ನು ನೋಡಿ ನಾವು ಬೆಲೆ ಏರಿಸಿದ್ದೇವೆ : ಸಚಿವ ರಾಮಲಿಂಗಾರೆಡ್ಡಿ

ಕೊಪ್ಪಳ : ಪ್ರಧಾನಿ ಮೋದಿಯವರು ಡೀಸೆಲ್ ಬೆಲೆ ಏರಿಕೆ ಮಾಡಿದನ್ನು ನೋಡಿ ನಾವು ಬೆಲೆ ಏರಿಸಿದ್ದೇವೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರು ಹೇಳಿದರು.
ಸೋಮವಾರದಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರಿನಲ್ಲಿ ನೂತನ ಬಸ್ ನಿಲ್ದಾಣದ ಶಂಕುಸ್ಥಾಪನೆ ಹಾಗೂ ಲೋಕೋಪಯೋಗಿ ಇಲಾಖೆಯ ಸರ್ಕಿಟ್ ಹೌಸ್ ಕಟ್ಟಡದ ಶಂಕುಸ್ಥಾಪನೆ ನೆರವೇರಿಸುವುದಕ್ಕಿಂತ ಮೊದಲು ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಮನಮೋಹನ್ ಸಿಂಗ್ ಅವರು ಪ್ರದಾನಿ ಹುದ್ದೆಗೆ ರಾಜಿನಾಮೆ ಕೊಟ್ಟಾಗ 63 ರೂ. ಪೆಟ್ರೋಲ್ ಮತ್ತು 50 ರೂ. ಡಿಸೇಲ್ ಇತ್ತು. ಮೋದಿ ಅವರು ಬೆಲೆ ಏರಿಸಿದ್ದಾರೆ ಅವರು ಬೆಲೆ ಇಳಿಸಿದರೆ ನಾವು ಇಳಿಸುತ್ತೇವೆ ಎಂದು ಹೇಳಿದರು.
ದೇಶದಲ್ಲಿ ಈವರೆಗೆ ಪೆಟ್ರೋಲ್ ಮತ್ತು ಡಿಸೇಲ್ ಮುಖಾಂತರ 36 ಲಕ್ಷ ಕೋಟಿ ರೂ. ತೆಗೆದುಕೊಂಡಿದ್ದಾರೆ, ಜಿಎಸ್‌ಟಿ ಮುಖಾಂತರ ನಮ್ಮ ರಾಜ್ಯದಿಂದ ಪ್ರತಿ ವರ್ಷ 5 ಲಕ್ಷ ಕೋಟಿ ರೂ. ತೆಗೆದುಕೊಳ್ಳುತ್ತಾರೆ. ಮರಳಿ ಕೊಡುವುದು 13 ಪೈಸೆಯಂತೆ 50 ಸಾವಿರ ಕೋಟಿ ರೂ. ಕೊಡುತ್ತಾರೆ ಎಂದರು.
14ಕ್ಕೆ ನಡೆಯಲಿರುವ ಲಾರಿ ಮುಷ್ಕರದ ಕುರಿತು ಮಾತನಾಡಿದ ಅವರು, ಲಾರಿ ಮಾಲಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ ಅವರೊಂದಿಗೆ ಮಾತನಾಡಿದ್ದು, ಮುಷ್ಕರ ಬೇಡ ಎಂದು ಹೇಳಿದ್ದೇನೆ. ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸುತ್ತೇವೆ ಎಂದರು.
ಜನರ ಅನುಕೂಲಕ್ಕಾಗಿ ರಾಜ್ಯದಲ್ಲಿ ಎರಡು ಸಾವಿರ ಬಸ್ಸುಗಳನ್ನು ಖರೀದಿಸಲಾಗುತ್ತಿದ್ದು, ಅದರಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 600 ರಿಂದ 700 ಬಸ್ಸುಗಳನ್ನು ಕೊಡುತ್ತೆವೆ, ಹಬ್ಬ-ಹರಿ ದಿನಗಳ ಸಂದರ್ಭ ಹಾಗೂ ಶಾಲಾ-ಕಾಲೇಜುಗಳ ಮಕ್ಕಳಿಗೆ ಹೊಸದಾಗಿ ಬಸ್ ಖರೀದಿಸುವುದರಿಂದ ಅವರು ದಿನಾಲೂ ಸಂಚಾರ ಮಾಡಲು ಅನುಕೂಲವಾಗುವುದರ ಜೊತೆಗೆ ಬಸ್ಸುಗಳ ಕೊರತೆ ನೀಗಿಸಿದಂತಾಗುತ್ತದೆ. ಯಲಬುರ್ಗಾ ಕ್ಷೇತ್ರದಲ್ಲಿ 16 ಬಸ್ ನಿಲ್ದಾಣಗಳನ್ನು ಕಟ್ಟುತ್ತಿದ್ದೆವೆ. ಇಂದು ಬೇವೂರು ಹಾಗೂ ಹಿರೇವಂಕಲಕುಂಟಾ ನೂತನ ಬಸ್ ನಿಲ್ದಾಣಗಳ ಶಂಕುಸ್ಥಾಪನೆ ನೆರವೇರಿಸುತ್ತಿದ್ದೆನೆ. ಮಂಗಳೂರಿಗೆ ಬಸ್ ನಿಲ್ದಾಣ ಮಾಡಲು ಇಂದೇ ಆದೇಶ ನೀಡಿದ್ದೆನೆ ಎಂದರು.
ಅಂಜನಾದ್ರಿಗೆ ಹಿಂದಿನ ಸರ್ಕಾರ 19 ಕೋಟಿ ರೂ. ಅನುದಾನ ನೀಡಿತ್ತು. ನಮ್ಮ ಸರ್ಕಾರ ಬಂದಮೇಲೆ 100 ಕೋಟಿ ರೂ. ಅನುದಾನ ನೀಡಲಾಗಿದೆ. ಪ್ರವಾಸಿ ಮಂದಿರ, ಶಾಫಿಂಗ್ ಕಾಂಪ್ಲೆಕ್ಸ್, ಪ್ರದಕ್ಷಿಣಾ ಪಥ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಲಿಸುವ ಮೂಲಕ ಆಂಜನೇಯ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ತಮ್ಮ ಮಕ್ಕಳನ್ನು ಕರೆದುಕೊಂಡು ಬಿಸಿಲಿನಲ್ಲಿ ನಿಲ್ಲುತ್ತಿದ್ದರು. ಅವರನ್ನು ನೋಡಿ ಎಲ್ಲಾ ಕಡೆ ಬಸ್ ನಿಲ್ದಾಣಗಳನ್ನು ಮಾಡುತ್ತಿದ್ದೆನೆ. ಇಂದು ಬೇವೂರ ಹಾಗೂ ಹಿರೇವಂಕಲಕುಂಟಾ ಬಸ್ ನಿಲ್ದಾಣಗಳ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. 6 ಕೋಟಿ ರೂ. ವೆಚ್ಚದಲ್ಲಿ ಮಂಗಳೂರು ಹೊಸ ಬಸ್ ನಿಲ್ದಾಣ ಮಾಡಲಾಗುವುದು. ಇದಕ್ಕೆ ಸಾರಿಗೆ ಸಚಿವರು ಇಂದೇ ಅನುಮೋದನೆ ನೀಡಿದ್ದಾರೆ ಎಂದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೇವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಂದಮ್ಮ ಗವಿಸಿದ್ದಪ್ಪ ಬಳಿಗಾರ, ಜಿಲ್ಲಾಧಿಕಾರಿ ನಲಿನ್ ಅತುಲ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವ್ಯವಸ್ಥಾಪಕ ನಿರ್ದೆಶಕರಾದ ರಾಚಪ್ಪ ಎಮ್., ಕಲಬುರಗಿ ಮುಖ್ಯ ಕಾಮಗಾರಿ ಅಭಿಯಂತರಾದ ಚನ್ನನ ಬೋರಯ್ಯ. ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಎಮ್.ವೆಂಕಟೇಶ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರಾದ ಹೇಮಂತ್, ಕೊಪ್ಪಳ ಸಹಾಯಕ ಆಯುಕ್ತರಾದ ಕ್ಯಾ. ಮಹೇಶ್ ಮಾಲಗಿತ್ತಿ, ಇತರೆ ಗಣ್ಯರು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.