ಮಂಡ್ಯ | ಠಾಣೆಯಲ್ಲೇ ಪೊಲೀಸರ ಮೇಲೆ ಹಲ್ಲೆ: ಯುವಕನ ಬಂಧನ

Update: 2024-12-28 22:02 IST
ಮಂಡ್ಯ | ಠಾಣೆಯಲ್ಲೇ ಪೊಲೀಸರ ಮೇಲೆ ಹಲ್ಲೆ: ಯುವಕನ ಬಂಧನ
  • whatsapp icon

ಮಂಡ್ಯ : ಪ್ರಕರಣವೊಂದರ ವಿಚಾರಣೆಗೆ ಠಾಣೆಗೆ ಬಂದ ಯುವಕ ಮತ್ತು ಪೊಲೀಸರ ನಡುವೆ ಪರಸ್ಪರ ಹಲ್ಲೆ ನಡೆದಿರುವ ಘಟನೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಶನಿವಾರ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆರೋಪಿ ಯುವಕ ಠಾಣೆಗೆ ಬಂದಾಗ ಪೊಲೀಸ್‌ ಸಿಬ್ಬಂದಿಯೊಬ್ಬರು ಅವರ ಮೇಲೆ ಹಲ್ಲೆ ಮಾಡಿದ್ದು, ಪ್ರತಿಯಾಗಿ ಆತನೂ ಹಲ್ಲೆ ಮಾಡಿದ್ದಾನೆ. ಇದೇ ವಿಚಾರವಾಗಿ ಮಹಿಳಾ ಸಿಬ್ಬಂದಿ ಸೇರಿದಂತೆ ಇತರ ಪೊಲೀಸರು ಯುವಕನ್ನು ತಡೆದು ಬಂಧಿಸಿರುವುದು ವಿಡಿಯೋದಲ್ಲಿದೆ.

ಈ ಸಂಬಂಧ ಯುವಕನ ವಿರುದ್ಧ ಪೊಲೀಸ್‌ ಸಿಬ್ಬಂದಿಯೊಬ್ಬರು ದೂರು ನೀಡಿದ್ದು, ಆತನನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿ ಪಾಂಡವಪುರ ಪುರಸಭೆ ಮಾಜಿ ಅಧ್ಯಕ್ಷ ಪಿ.ಎಸ್.ಜಗದೀಶ್ ಪುತ್ರ ಪಿ.ಜಿ.ಸಾಗರ್ ಆಗಿದ್ದು, ಈತನ ವಿರುದ್ಧ ಪೇದೆ ಅಭಿಷೇಕ್‍ಗೌಡ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಜಮೀನು ವಿವಾದ ಪ್ರಕರಣ ಸಂಬಂಧ ಸಾಗರ್ ವಿರುದ್ಧ ಲಕ್ಷ್ಮಿನಾರಾಯಾಣ ಎಂಬುವರು ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ದೂರವಾಣಿ ಕರೆಮಾಡಿ ಸಾಗರ್ ಅವರನ್ನು ಠಾಣೆಗೆ ಬರುವಂತೆ ಹೇಳಿದೆ. ಠಾಣೆಗೆ ಬಂದ ಸಾಗರ್ ಮತ್ತು ದೂರುದಾರ ಲಕ್ಷ್ಮಿನಾರಾಯಣ್ ನಡುವೆ ಮಾತಿನ ಚಕಮಕಿ ನಡೆಯಿತು. ಬಿಡಿಸಲು ಹೋದ ನನ್ನ ಮೇಲೆ ಸಾಗರ್ ಹಲ್ಲೆ ಮಾಡಿದ ಎಂದು ಪೇದೆ ಅಭಿಷೇಕ್‍ಗೌಡ ದೂರು ನೀಡಿದ್ದಾರೆ.

ಜಗಳ ಬಿಡಿಸಲು ಹೋದಾಗ ನನ್ನ ಮೇಲೆ ಸಾಗರ್ ಹಲ್ಲೆ ನಡೆಸಿದ್ದಲ್ಲದೆ, ಬಿಡಿಸಲು ಬಂದ ಮುಖ್ಯ ಪೇದೆ ಆನಂದ್, ಮಹಿಳಾ ಸಿಬ್ಬಂದಿಳಾದ ಲಕ್ಷ್ಮಿ, ಲತಾಮಣಿ, ಇತರ ಪೊಲೀಸರ ಮೇಲೂ ಹಲ್ಲೆ ಮಾಡಿದ್ದಾನೆ ಎಂದು ಪೇದೆ ಅಭಿಷೇಕ್‍ಗೌಡ ಆರೋಪಿಸಿದ್ದು, ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News