ನಾಗಮಂಗಲ ಗಲಭೆ ಪ್ರಕರಣ| ಬಂಧಿತ ಅಮಾಯಕರನ್ನು ಬಿಡುಗಡೆ ಮಾಡಲಾಗುವುದು: ಸಚಿವ ಚಲುವರಾಯಸ್ವಾಮಿ

Update: 2024-09-14 13:14 GMT

ಮಂಡ್ಯ: ನಾಗಮಂಗಲ ಗಲಭೆ ಪ್ರಕರಣದಲ್ಲಿ ಬಂಧಿಸಿರುವ ಅಮಾಯಕರ ಹೆಸರನ್ನು ಚಾರ್ಜ್ ಶೀಟ್‌ನಿಂದ ಕೈಬಿಡಲು ಸೂಚನೆ ನೀಡಿದ್ದೇನೆ. ಅಮಾಯಕರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ, ತಪ್ಪು ಮಾಡಿದವರನ್ನು ರಕ್ಷಣೆ ಮಾಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.

ಗಲಭೆಗೆ ಸಂಬಂಧಿಸಿದಂತೆ ಶನಿವಾರ ನಾಗಮಂಗಲದಲ್ಲಿ ನಡೆದ ಶಾಂತಿಸಭೆಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ ಕೆಲವು ಅಮಾಯಕರನ್ನು ಬಂಧಿಸಿರುವುದು ನಿಜ. ಆದರೆ, ಪರಿಶೀಲಿಸಿ ಪ್ರಕರಣದಿಂದ ಕೈಬಿಡಲಾಗುವುದು ಎಂದರು.

ಗಲಭೆ ಪ್ರಕರಣದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಭಾಗಿಯಾಗಿರಲಿಲ್ಲ. ಪೊಲೀಸ್ ಠಾಣೆಗೆ ಬಂದಿದ್ದರು ಅಷ್ಟೆ. ಹಾಗಾಗಿ ಅವರನ್ನು ಪ್ರಕರಣದಿಂದ ಕೈಬಿಡಲಾಗಿದೆ. ಮೆರವಣಿಗೆ ತಂಡದಲ್ಲಿದ್ದ ಅವರ ಪುತ್ರ ರಾಜೇಶ್ ಬಂಧನವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಗಲಭೆಗೆ ಕಾರಣ ಯಾರು ಎಂಬುದು ತನಿಖೆಯಿಂದ ಹೊರಬರುತ್ತದೆ. ಆದರೆ, ಕುಮಾರಸ್ವಾಮಿ ಮತ್ತು ಬಿಜೆಪಿಯವರು ಸರಕಾರವೇ ಕಾರಣ ಎಂದಿದ್ದಾರೆ. ಅದು ನನಗೆ ಮುಖ್ಯ ಅಲ್ಲ. ಮುಖ್ಯವಾಗಿ ನನ್ನ ಕ್ಷೇತ್ರದ ಜನ ಚೆನ್ನಾಗಿರಬೇಕು. ಯಾವುದೇ ಪಕ್ಷ ಮತ್ತು ಸಮುದಾಯವನ್ನು ಇದರಲ್ಲಿ ಎಳೆದು ತರುವುದು ನನಗೆ ಬೇಕಾಗಿಲ್ಲ ಎಂದು ಅವರು ಪ್ರತಿಕ್ರಿಯಿಸಿದರು.

ಚನ್ನಪಟ್ಟಣದ ಉಪಚುನಾವಣೆಗಾಗಿ ಗಲಭೆ ಸೃಷ್ಟಿ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತೀಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಇಲ್ಲಿಗೆ ಬಂದು ಪರಿಹಾರ ನೀಡಿದ್ದಾರೆ ಧನ್ಯವಾದ ಹೇಳುತ್ತೇನೆ. ಆದರೆ, ಇಲ್ಲಿಗೆ ಬಂದು ಜನರಿಗೆ ಏನು ಸಂದೇಶ ಕೊಟ್ಟಿದ್ದಾರೆ? ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು ಜವಾಬ್ಧಾರಿಯುತವಾಗಿ ಮಾತನಾಡಬೇಕು. ಅವರ ಮಾತಿಗೆ ಪ್ರತಿಕ್ರಿಯೇ ನೀಡದಿರುವುದೇ ಉತ್ತಮ ಎಂದರು.

ಪಟ್ಟಣ ಸಹಜ ಸ್ಥಿತಿಯತ್ತ ಮರಳಿದೆ. ಮನೆಬಿಟ್ಟು ಹೋಗಿರುವ ಎರಡು ಸಮುದಾಯದ ಯುವಕರು ಮನೆಗೆ ಬರಬೇಕು. ಪರಸ್ಪರ ಸೌಹಾರ್ದತೆಯಿಂದ ನಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News