ʼಹಿಂದಿ ದಿವಸ್ʼ ವಿರುದ್ಧ ‘ಹಿಂದಿ ತಿಥಿ ದಿವಸ’ ಆಚರಿಸಿ ಪ್ರತಿಭಟನೆ

Update: 2024-09-14 15:46 GMT

ಮಂಡ್ಯ: ಜಿಲ್ಲೆಯ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಶನಿವಾರ ‘ಹಿಂದಿ ತಿಥಿ ದಿವಸ’ ಆಚರಣೆ ಮಾಡುವ ಮೂಲಕ ʼಹಿಂದಿ ದಿವಸ್ʼ ಆಚರಣೆ ವಿರುದ್ಧ ವಿನೂತನ ಪ್ರತಿಭಟನೆ ದಾಖಲಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ), ನಾವು ದ್ರಾವಿಡ ಕನ್ನಡಿಗರು ಹಾಗೂ ಕರುನಾಡ ಸೇವಕರು ಸಂಘಟನೆಗಳ ಕಾರ್ಯಕರ್ತರು ಗಾಂಧೀಭವನದಿಂದ ಪ್ರಧಾನ ಅಂಚೆ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅಂಚೆ ಕಚೇರಿಯಲ್ಲಿ ಹಿಂದಿ ದಿವಸ ಆಚರಿಸದಂತೆ ಹಾಗೂ ವಹಿವಾಟುಗಳನ್ನು ಸಂಪೂರ್ಣವಾಗಿ ಕನ್ನಡದಲ್ಲೆ ನಡೆಸುವಂತೆ ಅಂಚೆ ಇಲಾಖೆಯ ಅಧಿಕಾರಿಗಳಿಗೆ ಪ್ರತಿಭಟನಾಕಾರರು ತಾಕೀತು ಮಾಡಿದರು.

ನಂತರ, ಬೆಂಗಳೂರು ಮೈಸೂರು ಹೆದ್ದಾರಿಯ ಮಹವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿ ದಾಸಪ್ಪನ ಮೂಲಕ ಶಂಖ, ಜಾಗಟೆ ಮೊಳಗಿಸಿ ಸಾಂಕೇತಿಕವಾಗಿ ‘ಹಿಂದಿ ತಿಥಿ ದಿವಸ’ ಆಚರಿಸಿದರು.

ರಾಜ್ಯದಲ್ಲಿರುವ ಅಂಚೆ ಕಚೇರಿ, ವಿಮಾ, ರೈಲ್ವೆ, ಬ್ಯಾಂಕ್ ಸೇರಿದಂತೆ ಕೇಂದ್ರ ಸರಕಾರದ ಇಲಾಖೆಯ ಕಚೇರಿಗಳಲ್ಲಿನ ಎಲ್ಲ ವ್ಯವಹಾರ ಕನ್ನಡದಲ್ಲೇ ನಡೆಸಬೇಕು. ಉದ್ಯೋಗದಲ್ಲಿ ಕನ್ನಡಗರಿಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ನಾವು ದ್ರಾವಿಡ ಕನ್ನಡಿಗರು ಸಂಘಟನೆಯ ಮುಖಂಡ ಅಭಿಗೌಡ ಮಾತನಾಡಿ, ಒಕ್ಕೂಟ ಸರಕಾರವು ಎಲ್ಲಾ ಪ್ರಾದೇಶಿಕ ಭಾಷೆಗಳಿಗೂ ಸಮಾನ ಆದ್ಯತೆ ನೀಡುತ್ತಿಲ್ಲ. ಬಲವಂತವಾಗಿ ಹಿಂದಿ ಭಾಷೆಯನ್ನು ಹೇರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೀಯ ಬ್ಯಾಂಕುಗಳು ಮಾತ್ರವಲ್ಲ, ಗ್ರಾಮೀಣ ಬ್ಯಾಂಕುಗಳಲ್ಲೂ ಹಿಂದಿ ಭಾಷಿಕರಿಗೆ ತುಂಬಿಕೊಂಡು ಕನ್ನಡಿಗರ ಕೆಲಸಕ್ಕೆ ಕುತ್ತು ತಂದಿದ್ದಾರೆ. ಇದು ಇಂಡಿಯಾ ಸರಕಾರವಾಗಿಲ್ಲ. ಬದಲಿಗೆ ಹಿಂದಿಯಾ ಸರಕಾರವಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಕಿಡಿಕಾರಿದರು.

ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಜಿಎಸ್‍ಟಿ ತೆರಿಗೆಯಲ್ಲಿ ರಾಜ್ಯಕ್ಕೆ ಬರಬೇಕಾದ ಪಾಲು ಸಿಗುತ್ತಿಲ್ಲ. ಕೇಂದ್ರ ಸರಕಾರದ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ಭಾಷೆ ನಿರಾಕರಿಸಲಾಗಿದೆ. ವಲಸಿಗರಿಗೆ ಅನುಕೂಲವಾಗುವ ನೀತಿಗಳಿಂದಾಗಿ ಮಂಡ್ಯದ ಮಾರುಕಟ್ಟೆ ವಹಿವಾಟು ಮಾರ್ವಾಡಿಗಳ ಕೈವಶವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂಘಟನೆಯ ಮುಖಂಡರಾದ ಚಂದ್ರು, ಪದ್ಮ ಬೆಟ್ಟಯ್ಯ, ಸಂಜು ಆಲಕೆರೆ, ದರ್ಶನ್, ಮುದ್ದೇಗೌಡ, ಭಾಸ್ಕರ್, ನಾಥಪ್ಪ, ಜೋಸೆಪ್, ಸುಕುಮಾರ್, ಕೃಷ್ಣೇಗೌಡ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News