ಕೋಮು ಸೌಹಾರ್ದತೆ ಕದಡುವ ಕೆಲಸವನ್ನು ನಮ್ಮ ಸರಕಾರ ಸಹಿಸುವುದಿಲ್ಲ: ಸಚಿವ ಚಲುವರಾಯಸ್ವಾಮಿ

Update: 2024-09-12 10:04 GMT

ಮಂಡ್ಯ : ಕೋಮು ಸೌಹಾರ್ದತೆ ಕದಡುವ ಕೆಲಸವನ್ನು ನಮ್ಮ ಸರಕಾರ ಸಹಿಸುವುದಿಲ್ಲ. ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಹೇಳಿದ್ದಾರೆ.

ನಾಗಮಂಗಲ ಪಟ್ಟಣದಲ್ಲಿ ಗಲಾಟೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಅವರು, ಪ್ರತ್ಯಕ್ಷದರ್ಶಿಗಳು, ಅಂಗಡಿ ಮುಂಗಟ್ಟುಗಳು ಹಾಗೂ ಗ್ಯಾರೇಜ್‌ಗಳ ಮಾಲಿಕರು ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಮಾತುಕತೆ ನಡೆಸಿ, ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮವಹಿಸಲಾಗುವುದು. ಈ ಘಟನೆ ನಡೆದಿರುವುದು ದುರದೃಷ್ಟಕರ. ಆಕಸ್ಮಿಕವಾಗಿ ನಡೆದ ಘಟನೆ, ನಂತರ ದೊಡ್ಡ ಮಟ್ಟದ ಗಲಭೆಗೆ ಕಾರಣವಾಗಿದೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಸುಮಾರು 54ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದ್ದು, ಘಟನೆಯಲ್ಲಿ ಪಾಲ್ಗೊಳ್ಳದ ಅಮಾಯಕರ ಬಂಧನವಾಗಿದ್ದಲ್ಲಿ ಸಿಸಿಟಿವಿ ಪರಿಶೀಲಿಸಿ, ಖಚಿತಪಡಿಸಿಕೊಂಡು ಬಿಡುಗಡೆ ಮಾಡಲು ಸೂಚಿಸಲಾಗಿದೆ. ನೈಜ ತಪ್ಪಿತಸ್ಥರನ್ನು ಬಿಡುವ ಪ್ರಶ್ನೆ ಇಲ್ಲ ಎಂದು ಅವರು ತಿಳಿಸಿದರು.

ಕೋಮು ಸೌಹಾರ್ದತೆಯನ್ನು ಕದಡುವ ಕೆಲಸವನ್ನು ನಮ್ಮ ಸರಕಾರ ಸಹಿಸುವುದಿಲ್ಲ. ನಮ್ಮ ಜನರಿಗೆ ಶಾಂತಿ ಸೌಹಾರ್ದತೆಯಿಂದ ಬದುಕುವ ವಾತಾವರಣ ಕಲ್ಪಿಸಿಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ. ಘಟನೆಯಲ್ಲಿ ಹಾನಿಗೊಳಗಾದ ಅಂಗಡಿಗಳು ಹಾಗೂ ಮನೆಗಳ ನಷ್ಟವನ್ನು ಅಂದಾಜಿಸಲಾಗುತ್ತಿದೆ. ಅವುಗಳ ಮಾಲೀಕರಿಗೆ ನ್ಯಾಯ ಒದಗಿಸುವ ಸಂಪೂರ್ಣ ಹೊಣೆ ನಮ್ಮದು. ಇದು ನನ್ನ ಸ್ವಕ್ಷೇತ್ರ. ನಷ್ಟ ಅನುಭವಿಸಿದವರಿಗೆ ವೈಯಕ್ತಿಕವಾಗಿಯೂ ಪರಿಹಾರ ಒದಗಿಸುವುದಾಗಿ ಅವರು ತಿಳಿಸಿದರು.

ಈ ಘಟನೆಯನ್ನು ರಾಜಕೀಯವಾಗಿ ಬಳಸದೇ ವಿರೋಧ ಪಕ್ಷಗಳು ಸಹ ಜವಾಬ್ದಾರಿಯಿಂದ ವರ್ತಿಸಬೇಕು. ಹಾಗೆಯೇ, ಮಾಧ್ಯಮಗಳು ನಮ್ಮೊಂದಿಗೆ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿಕೊಂಡರು‌‌‌‌.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News