ಬಿಜೆಪಿ-ಜೆಡಿಎಸ್ ಅಪವಿತ್ರ ಮೈತ್ರಿ ಅಭ್ಯರ್ಥಿಯನ್ನು ಸೋಲಿಸಿ, ಕಾಂಗ್ರೆಸ್ ಗೆಲ್ಲಿಸಿ: ಸಿಎಂ ಸಿದ್ದರಾಮಯ್ಯ
ಮಂಡ್ಯ: ಪ್ರಸ್ತುತ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಅಪವಿತ್ರ ಮೈತ್ರಿ ಅಭ್ಯರ್ಥಿಯನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಜನತೆಗೆ ಕರೆ ನೀಡಿದ್ದಾರೆ.
ನಗರದ ಮಂಡ್ಯ ವಿವಿ ಆವರಣದಲ್ಲಿ ರವಿವಾರ ಆಯೋಜಿಸಿದ್ದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಅವರನ್ನು ಲೋಕಸಭೆಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.
ಸುಮಲತಾ ಬಿಜೆಪಿಯಿಂದ ಗೆದ್ದವರಲ್ಲ, ಕಾಂಗ್ರೆಸ್ಸಿಗರ ಓಟುಗಳಿಂದ ಗೆದ್ದವರು. ಈಗ ಟಿಕೆಟ್‍ಗಾಗಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ತಿಕ್ಕಾಟ ಶುರುವಾಗಿದೆ. ಸುಮಲತಾ ಆಗಲೀ, ಜೆಡಿಎಸ್ ಆಗಲೀ ಯಾರೇ ಆದರೂ ಅಪವಿತ್ರ ಮೈತ್ರಿಯನ್ನು ಜನರು ಬೆಂಬಲಿಸುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೋಮವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಅವರು ವೆಸ್ಟೆಂಡ್ ಹೊಟೇಲ್‍ನಲ್ಲಿ ಕುಳಿತಕೊಂಡು ಅಧಿಕಾರ ಕಳೆದುಕೊಂಡರು. ಅವರನ್ನು ಕೆಳಗಿಳಿಸಿದವರು ಯಡಿಯೂರಪ್ಪ. ಈಗ ತನ್ನ ಸರಕಾರ ಕಿತ್ತಾಕಿದವರ ಜತೆ ಸೇರಿಕೊಂಡಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ನಷ್ಟದಲ್ಲಿದ್ದ ಮೈಷುಗರ್ ಕಾರ್ಖಾನೆಗೆ ಚಲುವರಾಯಸ್ವಾಮಿ 25 ಕೇಳಿದ್ದರು, ನಾನು 50 ಕೋಟಿ ರೂ. ನೀಡಿದೆ. ಈಗ ಹೊಸ ಕಾರ್ಖಾನೆ ನಿರ್ಮಿಸಲು ಬಜೆಟ್‍ನಲ್ಲಿ ಘೋಷಣೆ ಮಾಡಿದ್ದೇನೆ. ಮಣ್ಣಿನ ಮಕ್ಕಳು ಇದೆಲ್ಲಾ ಮಾಡಿದ್ರಾ? ಏನು ಮಾಡದೇ ಇದ್ದವರು ಈ ಮಣ್ಣಿನ ಮಕ್ಕಳಾ? ಎಂದು ಪ್ರಶ್ನಿಸಿದರು.
ನಮ್ಮ ನಿರೀಕ್ಷೆ ಮೀರಿ 136 ಸ್ಥಾನಗಳನ್ನು ಕೊಟ್ಟಿರುವ ಜನರಿಗೆ ಅಧಿಕಾರಕ್ಕೆ ಬಂದ ಮರುದಿನವೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ. ನುಡಿದಂತೆ ನಡೆದವರಿಗೆ ಬೆಂಬಲಿಸಬೇಕಾದುದು ನಿಮ್ಮ ಜವಾಬ್ಧಾರಿ. ಯಾರೇ ದಾರಿ ತಪ್ಪಿಸುವ ಯತ್ನ ನಡೆಸಿದರೂ ಪ್ರಬುದ್ಧ ಮತದಾರರು ಲೋಕಸಭಾ ಚುನಾವಣೆಯಲ್ಲೂ ಸರಿಯಾದ ತೀರ್ಮಾನ ಮಾಡುತ್ತಾರೆ ಎಂಬ ಭರವಸೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದ ಜನವಿರೋಧಿ ನೀತಿಗಳಿಂದ ರಾಸಾಯನಿಕ ಗೊಬ್ಬರ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಜನರಿಗೆ ಜಾತಿ, ಧರ್ಮ, ಪಕ್ಷಬೇಧವಿಲ್ಲದೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಆರ್ಥಿಕ ಸಮಾನತೆ ದೊರಕಿದಾಗ ಸಮಸಮಾಜ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದರು.
“ರಾಜ್ಯದಲ್ಲಿ ಬಿಜೆಪಿ ಯಾವತ್ತೂ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬರಲಿಲ್ಲ, ಆಪರೇಷನ್ ಕಮಲದ ಮೂಲಕ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದವರು. ಜೆಡಿಎಸ್‍ನವರೂ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಲಿಲ್ಲ, ಇನ್ನೊಬ್ಬರ ಹೆಗೆಲ ಮೇಲೆ ಕೂತು ಅಧಿಕಾರ ನಡೆಸಿದವರು. ಈಗ ಬಿಜೆಪಿಯವರ ಮೇಲೆ ಜೆಡಿಎಸ್‍ನವರಿಗೆ ಇದ್ದಕ್ಕಿದ್ದಂತೆ ಪ್ರೀತಿ ಬಂದು ಬಿಟ್ಟಿದೆ. ಬಿಜೆಪಿ ಕುಣಿತಕ್ಕೆ ಜೆಡಿಎಸ್ ತಾಳ ಹಾಕುತ್ತಿದೆ. ನಮ್ಮ ಸರಕಾರದ ಮೇಲೆ ಬಿಜೆಪಿಯವರು ಗೂಬೆ ಕೂರಿಸಿದರೆ, ಜೆಡಿಎಸ್‍ನವರು ಚಪ್ಪಾಳೆ ತಟ್ಟುತ್ತಾರೆ. ಇಂತಹವರ ಬಗ್ಗೆ ಜನರು ಎಚ್ಚರದಿಂದ ಇರಬೇಕು.”
ಸಿದ್ದರಾಮಯ್ಯ, ಮುಖ್ಯಮಂತ್ರಿ.