ಎಚ್‍ಡಿಕೆ ಸಿಎಂ ಆಗಿದ್ದಾಗ ನಿರ್ಮಲಾನಂದನಾಥ ಸ್ವಾಮೀಜಿಯ ಫೋನ್ ಟ್ಯಾಪ್ ಮಾಡಿದ್ದರು : ಸಚಿವ ಚಲುವರಾಯಸ್ವಾಮಿ
ಮಂಡ್ಯ: ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಯವರ ಫೋನ್ ಟ್ಯಾಪ್ ಮಾಡಿದ್ದರು. ಪರ್ಯಾಯವಾಗಿ ಮತ್ತೊಂದು ಮಠ ಮಾಡಿ ಅಗೌರವ ತೋರಿದ್ದರು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಗುರುವಾರ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ್ವರ ಬಂದಾಗ ಡಾಕ್ಟರ್ ಬಳಿ ಹೋಗುವುದು ಸಹಜ. ಈಗ ಚುನಾವಣೆ ಬಂದಿದೆ ಎಂಧು ಎಲ್ಲರ ಬಳಿ ಹೋಗುತ್ತಿದ್ದಾರೆ. ಎಸ್.ಎಂ.ಕೃಷ್ಣ ಅವರಿಗೆ ಸಿಎಂ ಸ್ಥಾನ ತಪ್ಪಿಸಿದ್ದು ಇವರೇ, ಈಗ ಅವರ ಬಳಿ ಹೋಗಿದ್ದಾರೆ ಎಂದು ಎಂದು ತಿರುಗೇಟು ನೀಡಿದರು.
ರೈತರ ಬಗ್ಗೆ ಕುಮಾರಸ್ವಾಮಿ ಅವರ ಕಾಳಜಿ ಏನು ಎಂಬುದು ಎಲ್ಲರಿಗೂ ಗೊತ್ತು. ಕೇಂದ್ರದ ರೈತ ವಿರೋಧಿ ಕರಾಳ ಕೃಷಿ ಕಾಯ್ದೆಗಳಿಗೆ ವಿಧಾನಸಭೆಯಲ್ಲಿ ಕೈ ಜೋಡಿಸಿ ಬೆಂಬಲ ನೀಡಿದರು. ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಬರಪರಿಹಾರವನ್ನು ಕೇಳುತ್ತಿಲ್ಲ ಎಂದು ಅವರು ಟೀಕಿಸಿದರು.
ನಮ್ಮ ಪಾಲಿನ ತೆರಿಗೆ ಪಾಲು, ಬರಪರಿಹಾರ ಬಿಡುಗಡೆಗೆ ಸೆಪ್ಟೆಂಬರ್ ನಲ್ಲೇ ನಾವು ಕೇಂದ್ರಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಅದೇ ರೀತಿ ತನ್ನ ಪಾಲಿಗಾಗಿ ಮಹಾರಾಷ್ಟ್ರ ಸರಕಾರ ಅರ್ಜಿ ಸಲ್ಲಿಸಿದಾಗ ಕರ್ನಾಟಕ ಸರಕಾರದ ಮಾದರಿಯಲ್ಲಿ ಅರ್ಜಿ ಸಲ್ಲಿಸಿ ಎಂದು ಸೂಚಿಸಲಾಗಿದೆ. ಹಾಗಿದ್ದರೂ ರಾಜ್ಯದ ಅರ್ಜಿಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಪ್ಪು ಹುಡುಕುತ್ತಿದ್ದಾರೆ ಏಕೆ? ಎಂದು ಅವರು ಪ್ರಶ್ನಿಸಿದರು.
ಮತಕ್ಕಾಗಿ ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿ ಆಗುವುದಾಗಿ ಹೇಳುತ್ತಿದ್ದಾರೆ. ಆದರೆ, ಕೇಂದ್ರದಲ್ಲಿ ಸಚಿವರಾದವರು ರಾಜ್ಯದ ಅಭಿವೃದ್ದಿಗೆ ಎಷ್ಟು ಅನುದಾನ ತಂದಿದ್ದಾರೆ ಎಂಬುದು ಗೊತ್ತಿದೆ. ಅಷ್ಟಾಗಿ ಅದೆಲ್ಲವನ್ನೂ ರಾಜ್ಯ ಸರಕಾರವೇ ಅನುಷ್ಠಾನ ಮಾಡಬೇಕು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.