ಮಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದ ಬೇಡಿಕೆ: ವಕೀಲರ ಸಂಘದ ನೇತೃತ್ವದಲ್ಲಿ ಹಿರಿಯ ವಕೀಲರ ಸಭೆ

Update: 2024-09-19 08:54 GMT

ಮಂಗಳೂರು: ವಕೀಲರ ಸಂಘದ ದಶಕಗಳ ಬೇಡಿಕೆಯಾದ ಮಂಗಳೂರಿನಲ್ಲಿ ಹೈ ಕೋರ್ಟ್ ನ ಸ್ಥಾಪನೆ ಆಗಬೇಕೆಂಬ ವಿಚಾರದಲ್ಲಿ ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಹೋರಾಟ ಸಮಿತಿಯನ್ನು ರಚಿಸಲಾಯಿತು.

ಈ ಸಂದರ್ಭದಲ್ಲಿ ಮಂಗಳೂರು ವಕೀಲರ ಸಂಘದ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯ  ಐವನ್ ಡಿಸೋಜರವರು ಸಭೆಯ ನೇತೃತ್ವ ವಹಿಸಿದ್ದರು.  

ದಕ್ಷಿಣ ಕನ್ನಡ ಜಿಲ್ಲೆ ಇತರ ತಾಲೂಕುಗಳ ವಕೀಲರ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿ ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಲು ತಮ್ಮ ಪೂರ್ಣ ಪೂರ್ಣ ಬೆಂಬಲವನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.

ಮಂಗಳೂರು ವಕೀಲರ ಸಂಘದ ಅಧ್ಯಕ್ಷ  ಎಚ್ ವಿ ರಾಘವೇಂದ್ರ, ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮೂಲಭೂತ ಸೌಕರ್ಯ ಇರುವ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಆದರೆ ಐದು ಜಿಲ್ಲೆಗಳ ಜನರಿಗೆ ಉಪಯೋಗವಾಗುತ್ತದೆ. ಈಗಾಗಲೇ ಮಂಗಳೂರು ನಗರದ ಜೈಲಿನ ಪ್ರದೇಶ ಬೇರೆ ಕಡೆಗಳಿಗೆ ಸ್ಥಳಾಂತರಿಸುವುದರಿಂದ ಅಲ್ಲಿ ಸುಮಾರು ಐದರಿಂದ ಆರು ಎಕರೆ ಸ್ಥಳ ಹೈಕೋರ್ಟ್ ಪೀಠ ಸ್ಥಾಪನೆಗೆ ಸೂಕ್ತ ಸ್ಥಳವಾಗಿದೆ. ಅಲ್ಲದೆ ಮಂಗಳೂರು ನಗರ ಹೈಕೋರ್ಟ್ ಪೀಠ ಸ್ಥಾಪಿಸಲು ಸೂಕ್ತ ಪ್ರದೇಶವಾಗಿದ್ದು, ಮಂಗಳೂರು ನಗರಕ್ಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೌಲಭ್ಯ, ರಸ್ತೆ ಸಾರಿಗೆ ಸೌಲಭ್ಯ ಇದೆ. ಅಲ್ಲದೆ ಮಂಗಳೂರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಗರವಾಗಿದ್ದು, ಹೆಚ್ಚಿನ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿದೆ ಎಂದರು.

ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೊಸ್ತಾ ಎಂ, ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ  ವಸಂತ ಮರಕಡ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ನ ಮಾಜಿ ಉಪಾಧ್ಯಕ್ಷ ಟಿ ಎನ್ ಪೂಜಾರಿ ಸಭೆಯಲ್ಲಿ ಉಪಸ್ಥಿತರಿದ್ದು ಬೆಂಬಲ ವ್ಯಕ್ತಪಡಿಸಿದರು.

ಸಭೆಯಲ್ಲಿ ಹಿರಿಯ ವಕೀಲರಾದ ಎಂ ಪಿ ನರೋನ್ಹ,  ಪೃಥ್ವಿರಾಜ್ ರೈ,   ಅಶೋಕ್ ಅರಿಗ, ಎಂ ಆರ್ ಬಲ್ಲಾಳ್,  ಮನುರಾಜ್, ಧಿನಕರ್ ಶೆಟ್ಟಿ, ಶ್ರೀಮತಿ ಆಶಾ ನಾಯಕ್, ಶ್ರೀಮತಿ ಸುಮನಾ ಶರಣ್, ಶ್ರೀ ಜಗದೀಶ ಶೇಣವ,  ಸಂಘದ ಉಪಾಧ್ಯಕ್ಷ ಸುಜಿತ್ ಕುಮಾರ್, ಕೋಶಾಧಿಕಾರಿ ಗಿರೀಶ್ ಶೆಟ್ಟಿ ಮತ್ತು ಇತರ ಹಿರಿಯ ವಕೀಲರು ಹೋರಾಟದ ರೂಪುರೇಷೆಗಳ ಬಗ್ಗೆ ವಿವರಿಸಿದರು.

ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಹೊಸ ಮನೆ ಸ್ವಾಗತಿಸಿ ಜೊತೆ ಕಾರ್ಯದರ್ಶಿ   ಜ್ಯೋತಿ ಸುವರ್ಣ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News