ಶ್ರೀಲಂಕಾದಲ್ಲಿ 23 ಭಾರತೀಯ ಮೀನುಗಾರರ ಬಂಧನ, 3 ದೋಣಿ ವಶ
ಮಧುರೈ; ಶ್ರೀಲಂಕಾ ನೌಕಾಪಡೆ ರವಿವಾರ 23 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ಮೀನುಗಾರಿಕೆಗೆ ಬಳಸಿದ್ದ ಮೂರು ದೋಣಿಗಳನ್ನು ವಶಪಡಿಸಿಕೊಂಡಿದೆ. ಬಂಧಿತ ಎಲ್ಲ 23 ಮೀನುಗಾರರು ರಾಮೇಶ್ವರಂನಿಂದ ಮೀನುಗಾರಿಕೆಗೆ ತೆರಳಿದ್ದು, ತನ್ನ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸಿದ ಆರೋಪದಲ್ಲಿ ಮೀನುಗಾರರನ್ನು ಬಂಧಿಸಲಾಗಿದೆ.
ಬಂಧಿತರನ್ನು ಜಾಫ್ನಾದ ಮಯಿತಿತ್ತಿ ನೆಲೆಗೆ ಕರೆದೊಯ್ದು ಸ್ಥಳೀಯ ಮೀನುಗಾರಿಕಾ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಮಂದಿನ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಸೋಮವಾರ ಈ ಮೀನುಗಾರರನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.
ಕಳೆದ ಜನವರಿಯಿಂದೀಚೆಗೆ ಶ್ರೀಲಂಕಾ ನೌಕಾಪಡೆ 65 ಮೀನುಗಾರಿಕೆ ದೋಣಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, 485 ಮಂದಿಯನ್ನು ಬಂಧಿಸಿದೆ. ಈ ಬಂಧನವನ್ನು ಖಂಡಿಸಿ ಮೀನುಗಾರರು ಮಂಗಳವಾರ ಪಂಬನ್ ನಲ್ಲಿ ರಸ್ತೆ ತಡೆ ಚಳವಳಿ ನಡೆಸಲು ನಿರ್ಧರಿಸಿದ್ದಾರೆ.
ಬಂಧಿತ ಮೀನುಗಾರರ ಶೀಘ್ರ ಬಿಡುಗಡೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರಯತ್ನ ನಡೆಸಬೇಕು ಎಂದು ಬೆಸ್ತ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.