ಅಮೆರಿಕದಿಂದ 73 ಸಾವಿರ ರೈಫಲ್: ಒಪ್ಪಂದಕ್ಕೆ ಭಾರತ ಸಹಿ
ಹೊಸದಿಲ್ಲಿ: ಪೂರ್ವ ಲಡಾಖ್ ನಲ್ಲಿ ಚೀನಾ ಜತೆಗಿನ ಸಂಘರ್ಷ ಮುಂದುವರಿದಿರುವ ನಡುವೆಯೇ ಅಮೆರಿಕದಿಂದ 73 ಸಾವಿರ ಎಸ್ಐಜಿ ಸವೂರ್ ಅಸಾಲ್ಟ್ ರೈಫಲ್ ಗಳನ್ನು ಆಮದು ಮಾಡಿಕೊಳ್ಳಲು ಭಾರತ ಇನ್ನೊಂದು ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಸೇನೆಯನ್ನು ಸರ್ವಸನ್ನದ್ಧಗೊಳಿಸುವ ಸಲುವಾಗಿ ಈಗಾಗಲೇ 72400 ಇಂತಹ ಬಂದೂಕುಗಳನ್ನು ಆಮದು ಮಾಡಿಕೊಳ್ಳಲಾಗಿದೆ.
ಎಸ್ಐಜಿ-716 ಗಸ್ತು ರೈಫಲ್, 7.62 * 51 ಮಿಲಿಮೀಟರ್ ಕ್ಯಾಲಿಬರ್ ಗನ್ ಗಳಾಗಿದ್ದು, 500 ಮೀಟರ್ ದೂರದವರೆಗೂ ದಾಳಿ ಮಾಡಿ ಹತ್ಯೆ ಮಾಡುವ ಪರಿಣಾಮಕಾರಿ ಬಂದೂಕುಗಳಾಗಿವೆ. ಇದನ್ನು ಚೀನಾ ಹಾಗೂ ಪಾಕಿಸ್ತಾನದ ಗಡಿಯುದ್ದಕ್ಕೂ ನಿಯೋಜಿತರಾಗುರುವ ಇನ್ಫ್ಯಾಂಟ್ರಿ ಬೆಟಾಲಿಯನ್ ಗಳಿಗೆ ಪೂರೈಸಲಾಗುತ್ತದೆ.
ಈ ಪುನರಾವರ್ತಿತ ಕಾರ್ಯಾದೇಶದ ಮೌಲ್ಯ 837 ಕೋಟಿ ರೂಪಾಯಿಗಳು ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ರಷ್ಯಾದ ಎಕೆ-203 ಕಲಶ್ನಿಕೋವ್ ರೈಫಲ್ ಗಳ ಉತ್ಪಾದನೆಯು ವಿಳಂಬವಾಗಿರುವ ಹಿನ್ನೆಲೆಯಲ್ಲಿ 72,400 ಎಸ್ಐಜಿ-716 ರೈಫಲ್ ಗಳನ್ನು 647 ಕೋಟಿ ರೂಪಾಯಿ ವೆಚ್ಚದಲ್ಲಿ ಆಮದು ಮಾಡಿಕೊಳ್ಳಲಾಗಿತ್ತು. ಅಮೆರಿಕದ ಎಸ್ಐಜಿ ಸವೂರ್ ಜತೆಗೆ ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿತ್ತು. ತ್ವರಿತಗತಿ ಖರೀದಿ ಮಾರ್ಗದ ಮೂಲಕ 2019ರ ಫೆಬ್ರುವರಿಯಲ್ಲಿ ಈ ಶಸ್ತ್ರಾಸ್ತ್ರ ಪೂರೈಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಕಳೆದ ವರ್ಷದ ಡಿಸೆಂಬರ್ ನಲ್ಲಿ 73 ಸಾವಿರ ಎಸ್ಐಜಿ-716 ರೈಫಲ್ ಗಳ ಖರೀದಿಗೆ ಒಪ್ಪಿಗೆ ನೀಡಿತ್ತು. ಪರ್ಯಾಯವಾಗಿ ಸೇನೆಯು 40949 ಲಘು ಮೆಷಿನ್ ಗನ್ ಗಳ ಖರೀದಿಗೂ ಮುಂದಾಗಿದ್ದು, 2165 ಕೋಟಿ ರೂಪಾಯಿ ಅಂದಾಜು ವೆಚ್ಚದ ಇದಕ್ಕೆ 2023ರ ಆಗಸ್ಟ್ ನಲ್ಲಿ ಡಿಎಸಿ ಒಪ್ಪಿಗೆ ನೀಡಿತ್ತು.