ಕ್ಯಾನ್ಸರ್ ರೋಗ ಇಲ್ಲದ ಮಹಿಳೆ ಮೇಲೆ ಕೀಮೊಥೆರಪಿ ಪ್ರಯೋಗಿಸಿದ ವೈದ್ಯ; 4.5 ಲಕ್ಷ ರೂ. ಪರಿಹಾರ ನೀಡಲು ಗ್ರಾಹಕರ ನ್ಯಾಯಾಲಯ ಆದೇಶ

Update: 2023-08-05 15:03 GMT

ಲಕ್ನೊ: ರೋಗಿಯೊಬ್ಬರಿಗೆ ಕ್ಯಾನ್ಸರ್ ಇರದಿದ್ದರೂ ಅವರ ಮೇಲೆ ಕೀಮೊಥೆರಪಿ ಪ್ರಯೋಗಿಸಿದ್ದರಿಂದ ಕೂದಲು ನಷ್ಟ, ದೃಷ್ಟಿ ಮಾಂದ್ಯತೆ, ದುರ್ಬಲ ರೋಗ ಪ್ರತಿರೋಧಕ ಶಕ್ತಿ ಹಾಗೂ ಇನ್ನಿತರ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ತುತ್ತಾಗಿದ್ದ ಮಹಿಳಾ ರೋಗಿಯೊಬ್ಬರಿಗೆ ವಾರ್ಷಿಕ ಶೇ. 7ರಷ್ಟು ಬಡ್ಡಿಯೊಂದಿಗೆ ರೂ. 4.5 ಲಕ್ಷ ಹಾಗೂ ಅದರೊಂದಿಗೆ ಹೆಚ್ಚುವರಿಯಾಗಿ ರೂ. 50,000 ಪರಿಹಾರ ಮೊತ್ತವನ್ನು ನೀಡುವಂತೆ ಲಖೀಂಪುರ್ ಖೇರಿಯ ಗ್ರಾಹಕರ ನ್ಯಾಯಾಲಯವೊಂದು ಕಿಂಗ್ ಜಾನ್ಸ್ ವೈದ್ಯಕೀಯ ವಿಶ್ವವಿದ್ಯಾಲಯದ ಕ್ಷಕಿರಣ ವಿಭಾಗದ ಪ್ರಾಧ್ಯಾಪಕರೊಬ್ಬರಿಗೆ ಆದೇಶಿಸಿದೆ ಎಂದು timesofindia.com ವರದಿ ಮಾಡಿದೆ.

ಈ ಅದೇಶವನ್ನು ಶುಕ್ರವಾರ ಮಧ್ಯಾಹ್ನದಂದು ಲಖೀಂಪುರ್ ಖೇರಿಯ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಶಿವ್ ಮೇನಾ ಶುಕ್ಲಾ, ಹಾಗೂ ಡಾ. ಅಲೋಕ್ ಕುಮಾರ್ ಶರ್ಮ ಮತ್ತು ಜೂಹಿ ಕುದ್ದುಸಿ ಅವರನ್ನೊಳಗೊಂಡ ನ್ಯಾಯಪೀಠವು ನೀಡಿದೆ.

ಈ ಪ್ರಕರಣವು ಲಖೀಂಪುರ ನಿವಾಸಿ ಎಂದು ಗುರುತಿಸಲಾಗಿರುವ ರಾಣಿ ಗುಪ್ತಾ ಎಂಬ ಸಂತ್ರಸ್ತ ಮಹಿಳೆಗೆ ಸಂಬಂಧಿಸಿದ್ದಾಗಿದೆ. ಆಕೆ ನವೆಂಬರ್ 2007ರಲ್ಲಿ ಲಖೀಂಪುರ್ ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಮ್ ಒಂದರಲ್ಲಿ ಸ್ತನದಲ್ಲಿನ ಗಡ್ಡೆಯನ್ನು ತೆಗೆಸಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಡಿಸೆಂಬರ್, 2007ರಲ್ಲಿ ರಾಣಿ ಗುಪ್ತ ಅವರು ಕಿಂಗ್ ಜಾನ್ಸ್ ವೈದ್ಯಕೀಯ ಮಹಾವಿದ್ಯಾಲಯದ ಹೊರ ರೋಗಿ ವಿಭಾಗಕ್ಕೆ ಭೇಟಿ ನೀಡಿ, ಆಗ ಅಲ್ಲಿನ ಕ್ಷಕಿರಣ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಹಿರಿಯ ವೈದ್ಯರಿಗೆ ತಮ್ಮ ವೈದ್ಯಕೀಯ ವರದಿಗಳನ್ನು ತೋರಿಸಿದ್ದರು. ನಂತರ ಆ ವೈದ್ಯರು, ಮತ್ತಷ್ಟು ರಕ್ತ ಪರೀಕ್ಷೆ ಹಾಗೂ ಕ್ಷಕಿರಣ ಮತ್ತು ಅಲ್ಟ್ರಾಸೌಂಡ್ ಪರೀಕ್ಷೆಗೆ ಒಳಗಾಗಲು ಸೂಚಿಸಿದ್ದರು. ಆ ವರದಿಗಳು ಬಂದ ನಂತರ ರೋಗಿ ರಾಣಿ ಗುಪ್ತ ಅವರಿಗೆ ಕೀಮೊಥೆರಪಿಗೆ ಒಳಗಾಗುವಂತೆ ಸಲಹೆ ನೀಡಿದ್ದರು.

ಈ ಸಲಹೆಯನ್ನು ಆಧರಿಸಿ ಜನವರಿ 1, 2008ರಿಂದ ಜನವರಿ 3, 2008ರ ನಡುವೆ ರಾಣಿ ಗುಪ್ತ ಕೀಮೊಥೆರಪಿಗೆ ಒಳಗಾಗಿದ್ದರು. ನಂತರ ಫೆಬ್ರವರಿಯಲ್ಲಿ ಮರುಭೇಟಿ ನೀಡುವಂತೆ ಅವರಿಗೆ ಸೂಚಿಸಲಾಗಿತ್ತು. ಆದರೆ, ಕೀಮೊಥೆರಪಿಗೆ ಒಳಗಾದ ನಂತರ ಅವರು ತೀವ್ರ ಮಾನಸಿಕ ಅಸ್ವಸ್ಥತೆಗೆ ಗುರಿಯಾಗಿದ್ದರು. ಹೀಗಾಗಿ ಎರಡನೆಯ ಸಲಹೆ ಪಡೆಯಲು ನಿರ್ಧರಿಸಿದ ಅವರು, ಮುಂಬೈನ ಖಾಸಗಿ ಕ್ಯಾನ್ಸರ್ ಆಸ್ಪತ್ರೆಯ ಹಿರಿಯ ವೈದ್ಯರಿಂದ ಸಲಹೆ ಪಡೆದಿದ್ದರು. ರಾಣಿ ಗುಪ್ತರ ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದ್ದ ವೈದ್ಯರು, ರಾಣಿ ಗುಪ್ತ ಆರೋಗ್ಯವಾಗಿರುವುದನ್ನು ದೃಢಪಡಿಸಿದ್ದರು. ಇದಾದ ನಂತರ ರಾಣಿ ಗುಪ್ತಾರು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News