ಬದ್ಲಾಪುರ್ ಪ್ರಕರಣ| ಆರೋಪಿಯ ಎನ್ ಕೌಂಟರ್ ಪೂರ್ವ ನಿಯೋಜಿತ ಕೃತ್ಯ; ಪೋಷಕರ ಆರೋಪ
ಮಹಾರಾಷ್ಟ್ರ: ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತ ಆರೋಪಿ ಅಕ್ಷಯ್ ಶಿಂಧೆ ಎನ್ ಕೌಂಟರ್ ಪೂರ್ವ ನಿಯೋಜಿತ ಕೃತ್ಯ ಎಂದು ಆತನ ಕುಟುಂಬ ಆರೋಪಿಸಿದೆ.
ಸೋಮವಾರ ಸಂಜೆ ಬದ್ಲಾಪುರ್ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಅಕ್ಷಯ್ ಶಿಂಧೆ ಪೊಲೀಸರ ಗುಂಡಿಗೆ ಬಲಿಯಾಗಿದ್ದ. ಅಕ್ಷಯ್ ಸಾವಿಗೆ ಕಾರಣವಾದ ಘಟನೆ ಬಗ್ಗೆ ಮಹಾರಾಷ್ಟ್ರ ಪೊಲೀಸರು ನೀಡಿದ ಹೇಳಿಕೆಯನ್ನು ಅಕ್ಷಯ್ ಕುಟುಂಬ ತಳ್ಳಿ ಹಾಕಿದ್ದು, ಇದರ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಹೇಳಿಕೊಂಡಿದ್ದಾರೆ.
ಈ ಬಗ್ಗೆ Aajtak ಜೊತೆ ಮಾತನಾಡಿದ ಅಕ್ಷಯ್ ತಾಯಿ ಅಲ್ಕಾ ಶಿಂಧೆ, ಅಕ್ಷಯ್ ಹತ್ಯೆ ಪೂರ್ವನಿಯೋಜಿತ ಸಂಚು, ಪೊಲೀಸರು ನನ್ನ ಮಗುವನ್ನು ಕೊಂದಿದ್ದಾರೆ. ಈ ಬಗ್ಗೆ ಪೊಲೀಸರನ್ನು ಮತ್ತು ಶಾಲಾ ಆಡಳಿತ ಮಂಡಳಿಯನ್ನು ತನಿಖೆಗೆ ಒಳಪಡಿಸಬೇಕು. ಈ ಬಗ್ಗೆ ತನಿಖೆ ಮತ್ತು ತಪ್ಪಿತಸ್ಥರಿಗೆ ಶಿಕ್ಷಯಾಗುವವರೆಗೆ ಅಕ್ಷಯ್ ಮೃತದೇಹವನ್ನು ನಾವು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.
ಘಟನೆಗೆ ಕೆಲ ಗಂಟೆಗಳ ಮೊದಲಷ್ಟೇ ತಲೋಜಾ ಜೈಲಿನಲ್ಲಿ ನಾನು ನನ್ನ ಮಗನನ್ನು ಕೊನೆಯ ಬಾರಿಗೆ ಭೇಟಿಯಾಗಿದ್ದೆ. ಆತನನ್ನು ಭೇಟಿ ಮಾಡಲು ಬೆಳಿಗ್ಗೆಯಿಂದ ಕಾಯುತ್ತಿದ್ದರೂ ಕೊನೆಗೆ ಮಧ್ಯಾಹ್ನ 15 ನಿಮಿಷಗಳ ಕಾಲ ಅವನೊಂದಿಗೆ ಮಾತನಾಡಲು ಅನುಮತಿ ಸಿಕ್ಕಿದೆ. ಕಳೆದ ಸೋಮವಾರ ನಾನು ಅವನನ್ನು ಭೇಟಿ ಮಾಡಿದಾಗ ಪೊಲೀಸ್ ಅಧಿಕಾರಿಗಳು ಥಳಿಸಿರುವ ಬಗ್ಗೆ ಹೇಳಿದ್ದ. ಇದನ್ನು ಪೂರ್ವ ನಿಯೋಜಿತವಾಗಿಯೇ ಮಾಡಲಾಗಿದೆ. ಕೆಲವು ರಾಜಕಾರಣಿಗಳ ಕೈವಾಡದಿಂದ ಇದನ್ನು ಮಾಡಲಾಗಿದೆ ಎಂದು ಅಕ್ಷಯ್ ತಾಯಿ ಆರೋಪಿಸಿದ್ದಾರೆ.
ನನ್ನ ಮಗ ಪಟಾಕಿ ಸಿಡಿಸಲು ಮತ್ತು ರಸ್ತೆ ದಾಟಲು ಹೆದರುತ್ತಿದ್ದ. ಅವನು ಪೊಲೀಸರ ಮೇಲೆ ಹೇಗೆ ಗುಂಡು ಹಾರಿಸುತ್ತಾನೆ? ಇದು ಸಾಧ್ಯವೇ? ಎಂದು ಅಕ್ಷಯ್ ತಾಯಿ ಇದೇ ವೇಳೆ ಪ್ರಶ್ನಿಸಿದ್ದಾರೆ.
ಶಾಲಾ ಶೌಚಾಲಯದಲ್ಲಿ ನಾಲ್ಕು ಮತ್ತು ಐದು ವರ್ಷದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಐದು ದಿನಗಳ ಹಿಂದೆ ಅಕ್ಷಯ್ ಶಿಂಧೆಯನ್ನು ಬಂಧಿಸಲಾಗಿತ್ತು. ಶಿಂಧೆ ಶಾಲೆಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಲೈಂಗಿಕ ದೌರ್ಜನ್ಯ ಪ್ರಕರಣ ಭಾರೀ ಪ್ರತಿಭಟನೆಗೂ ಕಾರಣವಾಗಿತ್ತು.
ಸ್ಥಳೀಯ ಪೊಲೀಸರು ಆರಂಭದಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದರು, ಆದರೆ ವ್ಯಾಪಕ ಪ್ರತಿಭಟನೆ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿತ್ತು. ಆರೋಪಿ ಅಕ್ಷಯ್ ಶಿಂಧೆ ಮತ್ತು ಶಾಲಾ ಆಡಳಿತ ಮಂಡಳಿ ಸದಸ್ಯರ ವಿರುದ್ಧ SIT ಸೋಮವಾರ ಆರೋಪಪಟ್ಟಿ ಸಲ್ಲಿಸಿತ್ತು.
ಪ್ರಕರಣದ ತನಿಖೆಗಾಗಿ ತಲೋಜಾ ಜೈಲಿನಿಂದ ಅಕ್ಷಯ್ ಗೆ ಬದ್ಲಾಪುರ್ಗೆ ಕರೆದೊಯ್ಯುತ್ತಿದ್ದಾಗ ಮುಂಬ್ರಾ ಬೈಪಾಸ್ ಬಳಿ ಪೊಲೀಸ್ ಬಂದೂಕನ್ನು ಕಸಿದುಕೊಂಡು ಸಹಾಯಕ ಇನ್ಸ್ಪೆಕ್ಟರ್ ಮೇಲೆ ಆತ ಫೈರಿಂಗ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಪೊಲೀಸರ ಪ್ರತಿದಾಳಿಗೆ ಆತ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.