"ಎಚ್ಚರಿಕೆ ವಹಿಸಿ": ಭಾರತ ಪ್ರಯಾಣದ ಬಗ್ಗೆ ನಾಗರಿಕರಿಗೆ ಕೆನಡಾ ಸರ್ಕಾರ ಸೂಚನೆ
ಹೊಸದಿಲ್ಲಿ : ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೆನಡಾ ಸರ್ಕಾರವು ಭಾರತಕ್ಕೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಮಂಗಳವಾರ ಸಲಹೆಯನ್ನು ನೀಡಿದೆ. ಖಾಲಿಸ್ತಾನಿ ಭಯೋತ್ಪಾದಕನ ಹತ್ಯೆಯಲ್ಲಿ "ಭಾರತ ಸರ್ಕಾರದ ಏಜೆಂಟರು" ಭಾಗಿಯಾಗಿದ್ದಾರೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿದೆ.
ಅನಿವಾರ್ಯವಿಲ್ಲದಿದ್ದರೆ ಭಾರತಕ್ಕೆ ಪ್ರಯಾಣಿಸಬೇಡಿ ಎಂದು ಕೆನಡಾ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ. "ಕುಟುಂಬ ಅಥವಾ ವ್ಯಾಪಾರದ ಉದ್ದೇಶಗಳಿಗೆ ಶೈಕ್ಷಣಿಕ ಉದ್ದೇಶಕ್ಕೆ ಭಾರತಕ್ಕೆ ಪ್ರಯಾಣಿಸುವ ಬಗ್ಗೆ ನೀವು ಮತ್ತೊಮ್ಮೆ ಯೋಚಿಸಬೇಕು. ನಿಮ್ಮ ಸುರಕ್ಷತೆಗೆ ಮತ್ತು ಭದ್ರತೆಗೆ ಅಪಾಯ ಬರಬಹುದು. ನೀವು ಈಗಾಗಲೇ ಅಲ್ಲಿದ್ದರೆ, ಅಲ್ಲಿರುವ ಅಗತ್ಯತೆಯ ಬಗ್ಗೆ ಯೋಚಿಸಿ. ಅನಗತ್ಯವಾಗಿ ಅಲ್ಲಿರಬೇಡಿ, ಅಲ್ಲಿಂದ ಹೊರಡಿ”ಎಂದು ಮಾರ್ಗ ಸೂಚಿಯಲ್ಲಿ ಹೇಳಲಾಗಿದೆ. ಕೆನಡಾ ಸರ್ಕಾರದ ವೆಬ್ಸೈಟ್ನಲ್ಲಿ ಪ್ರಕಟವಾದ ಸಲಹೆಯು ಭಾರತದಲ್ಲಿ ವಾಸಿಸುವ ಕೆನಡಾದ ಪ್ರಜೆಗಳು ಎಚ್ಚರಿಕೆಯಿಂದಿರುವಂತೆ ಒತ್ತಾಯಿಸಿದೆ.
"ಪರಿಸ್ಥಿತಿಯು ತ್ವರಿತವಾಗಿ ಬದಲಾಗಬಹುದು. ಸುರಕ್ಷತೆಯಿಂದಿರಿ. ಎಲ್ಲಾ ಸಮಯದಲ್ಲೂ ಬಹಳ ಜಾಗರೂಕರಾಗಿರಿ, ಸ್ಥಳೀಯ ಮಾಧ್ಯಮಗಳನ್ನು ಗಮನಿಸುತ್ತಿರಿ ಮತ್ತು ಸ್ಥಳೀಯ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಿ" ಎಂದು ಹೇಳಲಾಗಿದೆ.