ಬಿಹಾರ: NDA ಮೈತ್ರಿಕೂಟದ ಏಕೈಕ ಮುಸ್ಲಿಂ ಸಂಸದ ಮೆಹಬೂಬ್ ಅಲಿ ಕೈಸರ್ RJD ಗೆ ಸೇರ್ಪಡೆ
ಪಾಟ್ನಾ: ಬಿಹಾರದಲ್ಲಿನ ಬಿಜೆಪಿ ನೇತೃತ್ವದ NDA ಮೈತ್ರಿಕೂಟದ ಏಕೈಕ ಮುಸ್ಲಿಂ ಸಂಸದರಾಗಿದ್ದ LJP ಸಂಸದ ಮೆಹಬೂಬ್ ಅಲಿ ಕೈಸರ್, ರವಿವಾರ ಆರ್ಜೆಡಿ ಸೇರ್ಪಡೆಯಾಗಿದ್ದಾರೆ. ಇದರಿಂದ ವಿರೋಧ ಪಕ್ಷಗಳ ಬತ್ತಳಿಕೆಗೆ ಮತ್ತೊಂದು ಅಸ್ತ್ರ ಸೇರ್ಪಡೆಯಾದಂತಾಗಿದೆ.
LJP ವಿಭಜನೆಯಾದ ನಂತರ ಮಾಜಿ ಕೇಂದ್ರ ಸಚಿವ ಪಶುಪತಿ ಕುಮಾರ್ ಪಾರಸ್ ಅವರೊಂದಿಗೆ ಗುರುತಿಸಿಕೊಂಡಿದ್ದ ಕೈಸರ್ ಅವರಿಗೆ ಈ ಬಾರಿ ಚಿರಾಗ್ ಪಾಸ್ವಾನ್ ಟಿಕೆಟ್ ನಿರಾಕರಿಸಿದ್ದರು. ಹೀಗಾಗಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಸಮ್ಮುಖದಲ್ಲಿ ಕೈಸರ್ ಆರ್ಜೆಡಿ ಸೇರ್ಪಡೆಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆರ್ಜೆಡಿ ನಾಯಕ ತೇಜಸ್ವಿ ಯಾದವ್, “ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಅವರೊಂದಿಗೆ ಸಭೆ ನಡೆಸಿದ ನಂತರ ಕೈಸರ್ ಅವರು ಪಕ್ಷ ಸೇರ್ಪಡೆಯಾಗಿದ್ದಾರೆ. ನಾವು ಅವರ ಅನುಭವದಿಂದ ಲಾಭ ಗಳಿಸಲು ಪ್ರಯತ್ನಿಸುತ್ತೇವೆ. ಈ ಬೆಳವಣಿಗೆಯು ಆಡಳಿತಾರೂಢರ ವರ್ತನೆಯಿಂದ ಬೆದರಿಕೆಗೊಳಗಾಗಿರುವ ಸಂವಿಧಾನ ರಕ್ಷಣೆಗಾಗಿನ ನಮ್ಮ ಹೋರಾಟದ ಪರವಾಗಿ ದೇಶಾದ್ಯಂತ ಪ್ರಬಲ ಸಂದೇಶ ರವಾನಿಸಲಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸಹರ್ಸ ಜಿಲ್ಲೆಯ ಸಿಮ್ರಿ ಬಕ್ತಿಯಾರ್ಪುರ್ ನ ರಾಜ ವಂಶದಲ್ಲಿ ಜನಿಸಿದ ಕೈಸರ್, ಕಾಂಗ್ರೆಸ್ ಪಕ್ಷದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು ಹಾಗೂ 2013ರವರೆಗೆ ಬಿಹಾರ ಕಾಂಗ್ರೆಸ್ ಘಟಕದ ಮುಖ್ಯಸ್ಥರಾಗಿದ್ದರು.