ಆಂಧ್ರದಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ಕೊಡ್ತೇವೆ : ಬಿಜೆಪಿ ಮಿತ್ರಪಕ್ಷ ಟಿಡಿಪಿ ಘೋಷಣೆ

Update: 2024-05-11 14:33 GMT

ಚಂದ್ರಬಾಬು ನಾಯ್ಡು | PC : PTI 

ಅಮರಾವತಿ/ಹೊಸದಿಲ್ಲಿ: ಆಂಧ್ರದಲ್ಲಿ NDA ಅಧಿಕಾರಕ್ಕೆ ಬಂದರೆ ಮುಸ್ಲಿಮರ ಶೇ. 4ರಷ್ಟು ಮೀಸಲಾತಿಯನ್ನು ತೆಗೆದು ಹಾಕಲಿದೆ ಎಂದು ವೈಎಸ್ಆರ್ ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

ಚುನಾವಣಾ ಪ್ರಚಾರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಆಂಧ್ರದಲ್ಲಿ ಮುಸ್ಲಿಮರ ಶೇ. 4ರಷ್ಟು ಮೀಸಲಾತಿ ಮುಂದುವರಿಯಲಿದೆ ಎಂದು ಭರವಸೆ ನೀಡಿದ್ದಾರೆ.

ಇದಕ್ಕೂ ಮುನ್ನ ತೆಲಂಗಾಣದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಇಡೀ ದೇಶಕ್ಕೆ, ವಿಶೇಷವಾಗಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಇತರೆ ಹಿಂದುಳಿದ ವರ್ಗಗಳ ಪಾಲಿನ ಬಹು ದೊಡ್ಡ ಅಪಾಯವೆಂದರೆ, ಅವರು ತೆಲಂಗಾಣದಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿಯನ್ನು ಜಾರಿಗೆ ತಂದಿದ್ದಾರೆ. ಈ ಮುಸ್ಲಿಮರ ಶೇ. 4ರಷ್ಟು ಮೀಸಲಾತಿಯು ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯಿಂದ ನಡೆಸಲಾಗಿರುವ ದರೋಡೆಯಾಗಿದೆ. ಬಿಜೆಪಿ ಯಾವಾಗ ಅಧಿಕಾರಕ್ಕೆ ಬರುತ್ತದೊ, ಆಗ ಇಲ್ಲಿನ ಮುಸ್ಲಿಂ ಮೀಸಲಾತಿಯನ್ನು ಅಂತ್ಯಗೊಳಿಸುತ್ತದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಸೋನಿಯಾ ಗಾಂಧಿ ಜನ್ಮದಿನದಂದು ರೈತರ ರೂ. 2 ಲಕ್ಷ ಮೊತ್ತದ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ತಾನು ನೀಡಿದ್ದ ಭರವಸೆಯನ್ನು ಕಾಂಗ್ರೆಸ್ ಮುರಿದಿದೆ. ಅವರ ಸರಕಾರ ರಚನೆಯಾದರೆ, ಅವರದನ್ನು ಮಾಡುತ್ತಾರೆ ಎಂದು ನಾವೆಲ್ಲ ನಂಬಿದ್ದೆವು. ಆದರೆ, ಇದರಲ್ಲೊಂದು ಸಮಸ್ಯೆಯಿದ್ದು, ಅವರು ಸೋನಿಯಾ ಗಾಂಧಿಯ ಯಾವ ಜನ್ಮದಿನದಂದು ಇದನ್ನು ಮಾಡಲಾಗುವುದು ಎಂದು ಹೇಳಿಲ್ಲ. ಸರಕಾರ ರಚನೆಯಾಗಿ ಹಲವಾರು ದಿನಗಳೇ ಕಳೆದು ಹೋದರೂ, ರೈತರ ರೂ. 2 ಲಕ್ಷ ಸಾಲ ಮನ್ನಾ ಮಾತ್ರ ಆಗಿಲ್ಲ” ಎಂದು ಟೀಕಿಸಿದ್ದರು.

NDA ಮೈತ್ರಿಕೂಟ ಪಕ್ಷಗಳಾದ ಬಿಜೆಪಿ ಮತ್ತು ಟಿಡಿಪಿ ನಡುವಿನ ಈ ದ್ವಂದ್ವದ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್, “ಹಲೊ ಅಮಿತ್ ಶಾ, ನೀವೇಕೆ ಈ ವಿಚಾರವನ್ನು ಆಂಧ್ರದಲ್ಲಿ ನಿಮ್ಮ ಮೈತ್ರಿಪಕ್ಷದೊಂದಿಗೆ ಚರ್ಚಿಸಕೂಡದು? ಆಂಧ್ರಪ್ರದೇಶದಲ್ಲಿ NDA ಅಧಿಕಾರಕ್ಕೆ ಬಂದರೆ ಮುಸ್ಲಿಮರ ಶೇ. 4ರಷ್ಟು ಮೀಸಲಾತಿಯು ಹೋಗಲಿದೆ ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷವು ಅಪಪ್ರಚಾರ ನಡೆಸುತ್ತಿದೆ ಎಂದು ಎನ್.ಚಂದ್ರಬಾಬು ನಾಯ್ಡು ಹೇಳುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.

ಇತ್ತೀಚೆಗೆ ಚುನಾವಣಾ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡಿದ್ದ ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಆಂಧ್ರಚಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, “ಒಂದು ಕಡೆ ಮುಸ್ಲಿಮರ ಶೇ. 4ರಷ್ಟು ಮೀಸಲಾತಿಯನ್ನು ತೆಗೆದು ಹಾಕಲಾಗುವುದು ಎಂದು ಹೇಳುತ್ತಿರುವ ಬಿಜೆಪಿಯೊಂದಿಗೆ ಕೈ ಜೋಡಿಸಿರುವ ಚಂದ್ರಬಾಬು ನಾಯ್ಡು, ಮತ್ತೊಂದೆಡೆ ಮುಸ್ಲಿಮರನ್ನು ಓಲೈಸುವ ನಾಟಕವಾಡುತ್ತಿದ್ದಾರೆ” ಎಂದು ಟೀಕಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News