ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆಯ ಪ್ರತೀಕಾರ ತೀರಿಸುವುದಾಗಿ ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಸಿಂಗ್ ಪ್ರತಿಜ್ಞೆ
ಜೈಪುರ: ರಾಷ್ಟ್ರೀಯ ಕರ್ಣಿ ಸೇನಾದ ಮುಖ್ಯಸ್ಥ ಸುಖದೇವ ಸಿಂಗ್ ಗೊಗಾಮೆದಿ ಹತ್ಯೆಯ ಪ್ರತೀಕಾರವನ್ನು ತೀರಿಸಿಕೊಳ್ಳುವುದಾಗಿ ಬಿಜೆಪಿ ಸಂಸದ ಬ್ರಿಜ್‌ಭೂಷಣ ಶರಣ ಸಿಂಗ್ ಪ್ರತಿಜ್ಞೆ ಮಾಡಿದ್ದಾರೆ. ಸಿಂಗ್ ಸೋಮವಾರ ಇಲ್ಲಿಯ ಗೊಗಾಮೆದಿಯವರ ಸ್ವಗ್ರಾಮಕ್ಕೆ ಭೇಟಿ ನೀಡಿದ್ದರು.
ಸರ್ಜಿಕಲ್ ದಾಳಿ ನಡೆಯಬಹುದಾಗಿದ್ದರೆ, ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುವುದಿದ್ದರೆ, ಪಾಕಿಸ್ತಾನಕ್ಕೆ ಪಾಠವನ್ನು ಕಲಿಸಬಹುದಾಗಿದ್ದರೆ, ಬಚ್ಚಿಟ್ಟುಕೊಂಡಿರುವ ಗೊಗಾಮೆದಿ ಹಂತಕರನ್ನೂ ನ್ಯಾಯದ ಕಟಕಟೆಗೆ ತರಲಾಗುವುದು ಎಂದ ಸಿಂಗ್, ಗೊಗಾಮೆದಿ ಹತ್ಯೆಯ ಪ್ರತೀಕಾರವನ್ನು ತೀರಿಸಲಾಗುವುದು ಎಂದು ಕರ್ಣಿ ಸೇನಾ ಮುಖ್ಯಸ್ಥನ ಕುಟುಂಬ ಸದಸ್ಯರಿಗೆ ಹೇಳಿದರು.
ಡಿ.5ರಂದು ಗೊಗಾಮೆದಿಯವರನ್ನು ಅವರ ಜೈಪುರ ನಿವಾಸದಲ್ಲಿ ಇಬ್ಬರು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದರು. ಪೋಲಿಸರು ಈವರೆಗೆ ಇಬ್ಬರು ಶಾರ್ಪ್ ಶೂಟರ್‌ಗಳು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಸಿಂಗ್ ಸೋಮವಾರ 500ಕ್ಕೂ ಅಧಿಕ ವಾಹನಗಳು ಮತ್ತು ಹಲವಾರು ರಾಜಕಾರಣಿಗಳೊಂದಿಗೆ ಗೊಗಾಮೆದಿಯವರ ಸ್ವಗ್ರಾಮವನ್ನು ತಲುಪಿದ್ದರು. ಬಿಹಾರದ ಮಾಜಿ ಸಂಸದ ಆನಂದ ಮೋಹನ ಸಿಂಗ್ ಅವರೂ ಉಪಸ್ಥಿತರಿದ್ದು, ಗೊಗಾಮೆದಿಗೆ ನ್ಯಾಯಕ್ಕಾಗಿ ಆಗ್ರಹಿಸಿದರು.
ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷರಾಗಿರುವ ಬ್ರಿಜ್‌ಮೋಹನ ಸಿಂಗ್ ಅವರು ಆರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳಗಳನ್ನು ನೀಡಿದ ಆರೋಪಗಳನ್ನು ಎದುರಿಸುತ್ತಿದ್ದಾರೆ.