ದಿಲ್ಲಿ ಸಿಎಂ ಕೇಜ್ರಿವಾಲ್ ಜೈಲಿನಿಂದಲೇ ಕರ್ತವ್ಯ ನಿಭಾಯಿಸಬಹುದೇ?; ಜೈಲಿನ ನಿಯಮಗಳು ಏನು ಹೇಳುತ್ತವೆ?
ಹೊಸದಿಲ್ಲಿ: ದಿಲ್ಲಿ ಮದ್ಯ ನೀತಿ ಹಗರಣದಲ್ಲಿ ಗುರುವಾರ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿದ್ದುಕೊಂಡೇ ಸಿಎಂ ಕರ್ತವ್ಯ ನಿರ್ವಹಿಸಬಹುದೇ ಎಂಬ ಪ್ರಶ್ನೆ ಎದ್ದಿದೆ. ಯಾವುದೇ ಕಾನೂನು ಈ ನಿಟ್ಟಿನಲ್ಲಿ ಅಡ್ಡಿಯಾಗದೇ ಇದ್ದರೂ ಜೈಲಿನ ಮಾರ್ಗಸೂಚಿಗಳು ಸಿಎಂ ಕಾರ್ಯಭಾರ ನಿರ್ವಹಿಸುವುದನ್ನು ಕಷ್ಟಕರವಾಗಿಸಬಹುದು.
ಕೈದಿಯೊಬ್ಬರಿಗೆ ವಾರದಲ್ಲಿ ಎರಡು ಬಾರಿ ಮಾತ್ರ ತಮ್ಮ ಕುಟುಂಬ, ಸ್ನೇಹಿತರು ಅಥವಾ ಸಹವರ್ತಿಗಳನ್ನು ಭೇಟಿಯಾಗಬಹುದು. ಈ ನಿರ್ಬಂಧಗಳೊಂದಿಗೆ ಸಿಎಂ ಕರ್ತವ್ಯ ನಿಭಾಯಿಸುವುದು ಕಷ್ಟವಾಗಬಹುದು ಎಂದು ತಿಹಾರ್ ಜೈಲಿನ ಮಾಜಿ ಅಧಿಕಾರಿಯೊಬ್ಬರು ಹೇಳುತ್ತಾರೆ.
ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಯಾವುದೇ ಕಟ್ಟಡವನ್ನು ಜೈಲಾಗಿ ಪರಿವರ್ತಿಸುವ ಅಧಿಕಾರವಿರುವುದಿಂದ ಗೃಹ ಬಂಧನದಲ್ಲಿ ತಮ್ಮನ್ನು ಇರಿಸಲು ಅನುಮತಿಸಲು ಕೇಜ್ರಿವಾಲ್ ಕೋರಬಹುದು. ಹೀಗಾದಲ್ಲಿ ಮಾತ್ರ ಕೇಜ್ರಿವಾಲ್ ತಮ್ಮ ನಿವಾಸದಿಂದಲೇ ತಮ್ಮ ಕರ್ತವ್ಯವನ್ನು ನಿರ್ವಹಿಸಬಹುದು ಎಂದೂ ಆ ಅಧಿಕಾರಿ ಹೇಳುತ್ತಾರೆ.
ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಆ ಬಗ್ಗೆ ಸಂಶಯ ಬೇಡ, ಎಂದು ದಿಲ್ಲಿ ಸಚಿವೆ ಆತಿಶಿ ಹೇಳಿದ್ದಾರೆ.
ಆದರೆ ಕೇಜ್ರಿವಾಲ್ ರಾಜೀನಾಮೆ ನೀಡದೇ ಇದ್ದರೆ ಅದರ ಪರಿಣಾಮಗಳ ಬಗ್ಗೆ ಕೇಂದ್ರ ಗೃಹಸಚಿವಾಲಯ ಪರಿಶೀಲಿಸುತ್ತಿದೆ. ಅವರನ್ನು ಕೇಂದ್ರ ವಜಾಗೊಳಿಸಬಹುದು ಎಂದೂ ಕಾನೂನು ತಜ್ಞರು ಹೇಳುತ್ತಾರೆ. ಬಂಧಿತರಾದ ಸರ್ಕಾರಿ ಅಧಿಕಾರಿಗಳನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸುವ ಪ್ರಕ್ರಿಯೆಯ ಬಗ್ಗೆಯೂ ಹಲವು ತಜ್ಞರು ನೆನಪಿಸುತ್ತಾರೆ.