ರಾಜಸ್ಥಾನ ಕಾಂಗ್ರೆಸ್ ಘಟಕದ ಮುಖ್ಯಸ್ಥರ ನಿವಾಸದ ಮೇಲೆ ಈಡಿ ದಾಳಿ
ಜೈಪುರ: ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿಯ ಪ್ರಶ್ನೆ ಪತ್ರಿಕೆಗಳ ಸೋರಿಕೆ ಪ್ರಕರಣದಲ್ಲಿ ರಾಜಸ್ಥಾನ ಕಾಂಗ್ರೆಸ್ ಘಟಕದ ಮುಖ್ಯಸ್ಥ ಗೋವಿಂದ್ ಸಿಮಗ್ ದೊತಸರಗೆ ಸಂಬಂಧಿಸಿದ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯವು ದಾಳಿ ನಡೆಸಿದೆ. ಇನ್ನೂ ಆರು ಸ್ಥಳಗಳಲ್ಲಿ ಪತ್ತೆ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ ಎಂದು ndtv.com ವರದಿ ಮಾಡಿದೆ.
ಈ ದಾಳಿಯ ಬಗ್ಗೆ ದೊತಸರ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಾಜಸ್ಥಾನ ಚುನಾವಣೆಗೆ ಇನ್ನು ಒಂದು ತಿಂಗಳಿಗಿಂತ ಕಡಿಮೆ ಸಮಯವಿರುವಾಗ ಆಡಳಿತಾರೂಢ ಕಾಂಗ್ರೆಸ್ ನಾಯಕರ ಮೇಲೆ ಈ ದಾಳಿ ನಡೆದಿದ್ದು, ಅಧಿಕಾರಕ್ಕೆ ಮರಳುವ ಬಯಕೆ ಹೊಂದಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಸವಾಲು ಒಡ್ಡಿದೆ.
ಕಾಂಗ್ರೆಸ್ ನಾಯಕ ದಿನೇಶ್ ಖೊಡಾನಿಯ ಹಾಗೂ ಮತ್ತಿತರರ ನಿವಾಸಗಳನ್ನು ಒಳಗೊಂಡಂತೆ ಏಳು ಸ್ಥಳಗಳ ಮೇಲೆ ಕಳೆದ ವಾರ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯವು, ರೂ. 12 ಲಕ್ಷ ನಗದು ಹಾಗೂ ದೋಷಾರೋಪಕ್ಕೆ ಪೂರಕವಾಗುವಂತಹ ದಾಖಲೆಗಳನ್ನು ವಶಪಡಿಸಿಕೊಂಡಿತ್ತು ಎಂದು ವರದಿಯಾಗಿದೆ.
ಈ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ದಿನೇಶ್ ಖೊಡಾನಿಯ, “ಈ ದಾಳಿಯು ರಾಜಕೀಯ ಪ್ರೇರಿತವಾಗಿದೆ” ಎಂದು ಆರೋಪಿಸಿದ್ದಾರೆ. ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ರಾಜಸ್ಥಾನ ಲೋಕಸೇವಾ ಆಯೋಗದ ಸದಸ್ಯ ಬಾಬುಲಾಲ್ ಕಟಾರಾರೊಂದಿಗೆ ತನಗೆ ಸಂಪರ್ಕವಿದೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಸಭಾ ಸಂಸದ ಕಿರೋಡಿ ಲಾಲ್ ಮೀನಾ ವಿರುದ್ಧ ಮಾನ ಹಾನಿ ಪ್ರಕರಣ ದಾಖಲಿಸುವ ಕುರಿತು ನಾನು ಚಿಂತಿಸುತ್ತಿದ್ದೇನೆ ಎಂದೂ ದಿನೇಶ್ ಖೊಡಾನಿಯ ಹೇಳಿದ್ದಾರೆ.
ಜಾರಿ ನಿರ್ದೇಶನಾಲಯದ ವಿಚಾರಣೆಯು ಪೊಲೀಸರು ಆರೋಪಿಗಳ ವಿರುದ್ಧ ದಾಖಲಿಸಿಕೊಂಡಿರುವ ಪ್ರಕರಣವನ್ನು ಆಧರಿಸಿದ್ದು, “ಆರೋಪಿಗಳ ನಡುವೆ ಪರಸ್ಪರ ಮೌನ ಸಮ್ಮತಿಯಿತ್ತು, ಅವರು ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದರು.. ಹಾಗೂ ಆ ಪ್ರಶ್ನೆ ಪತ್ರಿಕೆಯನ್ನು ರೂ. 8-10 ಲಕ್ಷ ಮೊತ್ತಕ್ಕೆ ಪ್ರತಿ ಅಭ್ಯರ್ಥಿಗಳಿಗೆ ಒದಗಿಸಿದ್ದರು” ಎಂದು ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ನಮೂದಿಸಲಾಗಿದೆ. ಇದರ ಆಧಾರದಲ್ಲಿ ಜಾರಿ ನಿರ್ದೇಶನಾಲಯವು ಸ್ವಯಂಪ್ರೇರಿತವಾಗಿ ತನಿಖೆ ಕೈಗೊಂಡಿದೆ.