ಚಂಡಿಗಡ : ಬಿಜೆಪಿಗೆ ಸೇರಿದ್ದ ಮೂವರಲ್ಲಿ ಇಬ್ಬರು ಕೌನ್ಸಿಲರ್ ಗಳು ಆಪ್ ಗೆ ವಾಪಸ್

Update: 2024-03-09 14:51 GMT

Photo: indianexpress.com

ಚಂಡಿಗಡ : ಮಹತ್ತರ ಬೆಳವಣಿಗೆಯಲ್ಲಿ ಬಿಜೆಪಿಗೆ ಸೇರ್ಪಡೆಯಾದ ಕೆಲವೇ ದಿನಗಳಲ್ಲಿ, ಮೂವರು ಆಮ್ ಆದ್ಮಿ ಪಕ್ಷದ (ಎಎಪಿ) ಕೌನ್ಸಿಲರ್ ಗಳ ಪೈಕಿ ಇಬ್ಬರು ಶನಿವಾರ ಸಂಜೆ ಎಎಪಿಗೆ ವಾಪಾಸ್ಸಾಗಿದ್ದಾರೆ ಎಂದು indianexpress.com ವರದಿ ಮಾಡಿದೆ.

ಸೋಮವಾರ ನಡೆಯಲಿರುವ ಹಣಕಾಸು ಮತ್ತು ಗುತ್ತಿಗೆ ಸ್ಥಾಯಿ ಸಮಿತಿಯ ಚುನಾವಣೆಗೆ ಎರಡು ದಿನಗಳ ಮೊದಲು ಈ ಬೆಳವಣಿಗೆ ನಡೆದಿದೆ ಎಂದು ತಿಳಿದು ಬಂದಿದೆ. ಮೇಯರ್ ಚುನಾವಣೆಯಲ್ಲಿ ನಡೆದಿದ್ದ ಅಕ್ರಮದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆಗೆ ಒಂದು ದಿನ ಮೊದಲು, ಮೂವರು ಎಎಪಿ ಕೌನ್ಸಿಲರ್ಗಳನ್ನು ಬಿಜೆಪಿ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ನೇಹಾ ಮುಸಾವತ್ ಮತ್ತು ಪೂನಂ ದೇವಿ ಅವರು ಗುರ್ಚರಣ್ ಕಲಾ ಅವರೊಂದಿಗೆ ಫೆಬ್ರವರಿ 18 ರಂದು ಸುಪ್ರೀಂ ಕೋರ್ಟ್ ವಿಚಾರಣೆಗೆ ಮುನ್ನ ಬಿಜೆಪಿಗೆ ಸೇರ್ಪಡೆಗೊಂಡರು. ಆ ಮೂಲಕ ಚಂಡಿಗಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಬಲವನ್ನು 14 ರಿಂದ 17 ಕ್ಕೆ ಹೆಚ್ಚಿಸಿದರು. ಅವರ ಈ ನಡೆಯಿಂದ ಎಎಪಿ-ಕಾಂಗ್ರೆಸ್ ಮೈತ್ರಿ ವಿರುದ್ಧ ಬಿಜೆಪಿಯು ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಎರಡು ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡಿತು.

ಶನಿವಾರದಂದು, ನೇಹಾ ಮತ್ತು ಪೂನಂ ದೇವಿ ಅವರು ಪಂಜಾಬ್ ಹಿರಿಯ AAP ನಾಯಕರ ಸಮ್ಮುಖದಲ್ಲಿ ಆಮ್ ಆದ್ಮಕಿ ಪಕ್ಷಕ್ಕೆ ವಾಪಸ್ಸಾದರು.

ಈ ಕುರಿತು ಮಾತನಾಡಿದ ಚಂಡಿಗಡ ಎಎಪಿಯ ಉಸ್ತುವಾರಿ ಡಾ ಸನ್ನಿ ಅಹ್ಲುವಾಲಿಯಾ “ಅವರು ಮನೆಗೆ ಮರಳಿದ್ದಾರೆ… ಇದು ತವರು ಮನೆಗೆ ಬಂದ ಅನುಭವ. ಸದ್ಯಕ್ಕೆ ಬಿಜೆಪಿಯಲ್ಲಿ ನಮ್ಮ ಇನ್ನೂ ಇಬ್ಬರು ಕೌನ್ಸಿಲರ್ಗಳಿದ್ದು, ಅವರನ್ನು ವಾಪಸ್ ಪಡೆಯುತ್ತೇವೆ” ಎಂದು ಹೇಳಿದ್ದಾರೆ.

ಪಕ್ಷಾಂತರ ವಿರೋಧಿ ಕಾನೂನು ಸ್ಥಳೀಯ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ. ಇದು ಆಪ್ ಗೆ ವಾಪಾಸಾದ ಕೌನ್ಸಿಲರ್ಗಳಿಗೆ ವರದಾನವಾಗಲಿದೆ.

ಇದೀಗ ಚಂಡಿಗಡ ಮಹಾನಗರ ಪಾಲಿಕೆಯ ಹೊಸ ಅಂಕಿಅಂಶಗಳ ಪ್ರಕಾರ, 35 ಸದಸ್ಯ ಬಲದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಿಜೆಪಿಯ ಬಲ 15 ಕ್ಕೆ ಇಳಿದಿದ್ದರೆ, ಆಪ್ – ಕಾಂಗ್ರೆಸ್ ಮೈತ್ರಿಕೂಟದ ಸದಸ್ಯರ ಸಂಖ್ಯೆ ಕ್ರಮವಾಗಿ 12, 7 ಸದಸ್ಯ ಬಲದೊಂದಿಗೆ 19ಕ್ಕೇರಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News