ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ
ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 69.50 ರೂ.ಗಳಷ್ಟು ಇಳಿಕೆ ಮಾಡಿದ್ದು,ನೂತನ ದರಗಳು ಶನಿವಾರದಿಂದಲೇ ಜಾರಿಗೊಂಡಿವೆ. ಈ ದರ ಇಳಿಕೆಯು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಉದ್ಯಮಗಳಿಗೆ ಕೊಂಚ ನೆಮ್ಮದಿಯನ್ನು ಒದಗಿಸಿದೆ.
ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಇದು ಈ ವರ್ಷದಲ್ಲಿ ಮೂರನೇ ದರ ಇಳಿಕೆಯಾಗಿದೆ. ಈ ಹಿಂದೆ ಮೇ 1ರಂದು 19 ಕೆ.ಜಿ.ತೂಕದ ವಾಣಿಜ್ಯ ಬಳಕೆ ಸಿಲಿಂಡರ್‌ನ ಬೆಲೆಯನ್ನು 19 ರೂ.ಕಡಿತ ಮಾಡಲಾಗಿತ್ತು. ಅದಕ್ಕೂ ಮುನ್ನ ಎ.1ರಂದು ಬೆಲೆಯನ್ನು 30.50 ರೂ.ಗಳಷ್ಟು ಇಳಿಸಲಾಗಿತ್ತು.
ಇಂದಿನ ಬೆಲೆ ಪರಿಷ್ಕರಣೆಯೊಂದಿಗೆ 19 ಕೆ.ಜಿ.ಯ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ದಿಲ್ಲಿಯಲ್ಲಿ 1,676 ರೂ.,ಕೋಲ್ಕತಾದಲ್ಲಿ 1,787 ರೂ.,ಮುಂಬೈನಲ್ಲಿ 1,629 ರೂ.ಮತ್ತು ಚೆನ್ನೈನಲ್ಲಿ 1,840.50 ರೂ.ಆಗಿವೆ.
ಸರಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. ಮತ್ತು ಹಿಂದುಸ್ಥಾನ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. ಪ್ರತಿ ತಿಂಗಳು 1ರಂದು ಎಲ್‌ಪಿಜಿ ಬೆಲೆಗಳನ್ನು ಪರಿಷ್ಕರಿಸುತ್ತವೆ.