ಹರ್ಯಾಣ ಸಿಎಂ ಗಾದಿಗೆ ಕಾಂಗ್ರೆಸ್ ನಲ್ಲಿ ಪೈಪೋಟಿ

Update: 2024-10-06 06:00 GMT

ಭೂಪೇಂದ್ರ ಸಿಂಗ್ ಹೂಡಾ PC: x.com/Rehna_AntiCaste

ಹೊಸದಿಲ್ಲಿ: ಹರ್ಯಾಣದಲ್ಲಿ ಕಾಂಗ್ರೆಸ್ ಪಕ್ಷ ಹತ್ತು ವರ್ಷದ ಬಳಿಕ ಮತ್ತೆ ಅಧಿಕಾರಕ್ಕೆ ಮರಳಲಿದೆ ಎಂದು ಚುನಾವಣಾ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿರುವ ಬೆನ್ನಲ್ಲೇ, ಪಕ್ಷದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಕುತೂಹಲ ಮೂಡಿದೆ.

ಮುಂದಿನ ಸಿಎಂ ಯಾರಾಗಬೇಕು ಎಂಬ ನಿರ್ಧಾರ ಹೈಕಮಾಂಡ್ ಗೆ  ಬಿಟ್ಟದ್ದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ಭೂಪೇಂದ್ರ ಸಿಂಗ್ ಹೂಡಾ ಹೇಳಿದ್ದಾರೆ.

ಒಟ್ಟು 90 ಸದಸ್ಯಬಲದ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 46 ಸ್ಥಾನಗಳ ಅಗತ್ಯವಿದೆ. ಬಹುತೇಕ ಚುನಾವಣಾ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಪಕ್ಷ 44 ರಿಂದ 61 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಪಕ್ಷದ ಹಿರಿಯ ಮುಖಂಡರಾದ ಕುಮಾರಿ ಶೆಲ್ಜಾ ಮತ್ತು ರಣದೀಪ್ ಸುರ್ಜೇವಾಲಾ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೂಡಾ, ಇದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಪಕ್ಷ ಸಂಪುಟ ರಚನೆ ಬಗ್ಗೆ ಕಾರ್ಯಪ್ರವೃತ್ತವಾಗಿದೆಯೇ ಎಂದು ಕೇಳಿದಾಗ, "ಅದು ಹೈಕಮಾಂಡ್ ಗೆ ಬಿಟ್ಟದ್ದು. ಇವೆಲ್ಲ ಕಾಲ್ಪನಿಕ ಪ್ರಶ್ನೆಗಳು" ಎಂದು ಹೇಳಿದರು.

"ಇನ್ನೂ ಹೆಚ್ಚಿನ ಸ್ಥಾನಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಬಿಜೆಪಿ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಭ್ರಷ್ಟಾಚಾರ ವ್ಯಾಪಕವಾಗಿತ್ತು ಹಾಗೂ ಕ್ರೀಡಾ ಕ್ಷೇತ್ರದಲ್ಲೂ ಇದು ಹೊರತಾಗಿರಲಿಲ್ಲ" ಎಂದು ಟೀಕಿಸಿದರು.

ಶೆಲ್ಜಾ ಸಿಎಂ ಆಗುತ್ತಾರೆಯೇ ಎಂದು ಕೇಳಿದಾಗ, "ಇದು ಪ್ರಜಾಪ್ರಭುತ್ವ; ಪ್ರತಿಯೊಬ್ಬರಿಗೂ ಆಕಾಂಕ್ಷೆ ಇರುತ್ತದೆ. ನೀವು ಕೂಡಾ ಆಸೆ ಪಡಬಹುದು. ಆದರೆ ಶಾಸಕರು ನಿರ್ಧರಿಸುತ್ತಾರೆ. ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ" ಎಂದು ಪ್ರತಿಕ್ರಿಯಿಸಿದರು.

ಸೆಪ್ಟೆಂಬರ್ 27ರಂದು ನಡೆದ ಬೃಹತ್ ರ್‍ಯಾಲಿಯಲ್ಲಿ ಹೂಡಾ, "ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತ ಗಳಿಸಲಿದೆ ಮತ್ತು ಪಕ್ಷದಲ್ಲಿ ಒಳಜಗಳ ಇದೆ ಎಂಬ ಆರೋಪ ನಿರಾಧಾರ. ಸಿಎಂ ಹುದ್ದೆಗೆ ಹೆಚ್ಚು ಮಂದಿ ಆಕಾಂಕ್ಷಿಗಳು ಇದ್ದಾರೆ ಎಂದಾದಲ್ಲಿ ಪಕ್ಷ ಮತ್ತಷ್ಟು ಬಲಗೊಳ್ಳುತ್ತದೆ" ಎಂದು ಹೇಳಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News