ಕಾಂಗ್ರೆಸ್ ಪಕ್ಷವು ಕ್ರಿಕೆಟ್ ತಂಡದಲ್ಲಿ ಮುಸಲ್ಮಾನರಿಗೆ ಆದ್ಯತೆ ನೀಡಲಿದೆ : ಪ್ರಧಾನಿ ನರೇಂದ್ರ ಮೋದಿ
ಭೋಪಾಲ : ಧರ್ಮದ ಆಧಾರದಲ್ಲಿ ಕ್ರೀಡೆಗಳಲ್ಲಿ ಮುಸಲ್ಮಾನರಿಗೆ ಪ್ರಾಶಸ್ತ್ಯ ನೀಡಲು ಕಾಂಗ್ರೆಸ್ ಪಕ್ಷವು ಉದ್ದೇಶಿಸಿದೆ, ಕ್ರಿಕೆಟ್ ತಂಡದಲ್ಲಿ ಯಾರು ಇರುತ್ತಾರೆ ಮತ್ತು ಯಾರು ಇರುವುದಿಲ್ಲ ಎನ್ನುವುದನ್ನು ಅದು ನಿರ್ಧರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಮಂಗಳವಾರ ಮಧ್ಯಪ್ರದೇಶಧ ಧಾರ್ ನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮೋದಿಯವರ ಈ ಹೇಳಿಕೆಯ ತುಣುಕು ಎಕ್ಸ್‌ನಲ್ಲಿ ವೈರಲ್ ಆಗಿದೆ. ‘ಕಾಂಗ್ರೆಸ್‌ನ ಉದ್ದೇಶ ಅದೇ ಆಗಿದ್ದರೆ ಅದು 1947ರ ಬಳಿಕ ದೇಶವನ್ನು ಮೂರು ಭಾಗಗಳಾಗಿ ಏಕೆ ವಿಭಜಿಸಿತ್ತು ಎಂದು ಅದನ್ನು ಪ್ರಶ್ನಿಸಲು ನಾನು ಬಯಸಿದ್ದೇನೆ. ಅದೇ ವೇಳೆ ಇಡೀ ದೇಶವನ್ನು ಪಾಕಿಸ್ತಾನವನ್ನಾಗಿ ಮಾಡಬಹುದಿತ್ತು ಮತ್ತು ಭಾರತವು ಅಳಿಸಿ ಹೋಗುತ್ತಿತ್ತು ’ ಎಂದು ಹೇಳಿದ ಮೋದಿ,ತಾನು ಬದುಕಿರುವವರೆಗೂ ನಕಲಿ ಜಾತ್ಯತೀತವಾದದ ಹೆಸರಿನಲ್ಲಿ ಭಾರತದ ಅನನ್ಯತೆಯನ್ನು ಅಳಿಸುವ ಯಾವುದೇ ಪ್ರಯತ್ನ ಯಶಸ್ವಿಯಾಗಲು ಅವಕಾಶ ನೀಡುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷವು ಜಮ್ಮು-ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿಯನ್ನು ತರದಂತೆ ಮತ್ತು ಅಯೋಧ್ಯೆಯ ರಾಮ ಮಂದಿರಕ್ಕೆ ‘ಬಾಬರಿ ಬೀಗ’ವನ್ನು ಹಾಕದಂತೆ ನೋಡಿಕೊಳ್ಳಲು ಬಿಜೆಪಿ ನೇತೃತ್ವದ ಎನ್‌ಡಿಎಗೆ 400 ಸ್ಥಾನಗಳ ಜನಾದೇಶವನ್ನು ತಾನು ಬಯಸಿದ್ದೇನೆ ಎಂದು ಮೋದಿ ಹೇಳಿದರು.