ಮಾ.14ರಿಂದ ಐಪಿಎಲ್-2025 ಆರಂಭ, ಮೇ 25ಕ್ಕೆ ಫೈನಲ್
ಚೆನ್ನೈ : ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟಿ20 ಪಂದ್ಯಾವಳಿಯು ಮಾರ್ಚ್ 14ರಿಂದ ಮೇ 25ರ ತನಕ ನಡೆಯಲಿದೆ ಎಂದು ಐಪಿಎಲ್ ಫ್ರಾಂಚೈಸಿಗಳಿಗೆ ಬಿಸಿಸಿಐ ತಿಳಿಸಿದೆ.
2026 ಹಾಗೂ 2027ರ ಆವೃತ್ತಿಯೂ ಇದೇ ಅವಧಿಯಲ್ಲಿ ನಡೆಸಲು ಬಿಸಿಸಿಐ ಯೋಜಿಸಿದೆ.
ಜಿದ್ದಾದಲ್ಲಿ ರವಿವಾರದಿಂದ 2 ದಿನಗಳ ಕಾಲ ನಡೆಯಲಿರುವ ಆಟಗಾರರ ಹರಾಜಿಗೆ ಇಂಗ್ಲೆಂಡ್ನ ವೇಗಿ ಜೋಫ್ರಾ ಆರ್ಚರ್, ಭಾರತ ಮೂಲದ ಅಮೆರಿಕದ ವೇಗದ ಬೌಲರ್ ಸೌರಭ್ ನೇತ್ರಾವಲ್ಕರ್ ಹಾಗೂ ಮುಂಬೈನ ವಿಕೆಟ್ಕೀಪರ್-ಬ್ಯಾಟರ್ ಹಾರ್ದಿಕ್ ಟಾಮೋರ್ ಅವರನ್ನು ಸೇರಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ.
2026ರ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 15ರಂದು ಆರಂಭವಾಗಲಿದ್ದು, ಮೇ 31ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ.
2027ರ ಆವೃತ್ತಿಯು ಮತ್ತೊಮ್ಮೆ ಮಾರ್ಚ್ 14ರಂದು ಆರಂಭವಾಗಲಿದ್ದು, ಫೈನಲ್ ಪಂದ್ಯವು ಮೇ 30ರಂದು ನಡೆಯಲಿದೆ. ಎಲ್ಲ ಮೂರು ಆವೃತ್ತಿಯ ಐಪಿಎಲ್ ಟೂರ್ನಿ ಫೈನಲ್ ಪಂದ್ಯಗಳು ರವಿವಾರವೇ ನಡೆಯಲಿದೆ.
ಐಪಿಎಲ್ನಲ್ಲಿ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜಿಸಿರುವ ಬಿಸಿಸಿಐ, 10 ವಾರಗಳ ಕಾಲ ಟೂರ್ನಿ ನಡೆಯುವುದನ್ನು ಖಚಿತಪಡಿಸಲು ಬಯಸಿದೆ.
ಐಪಿಎಲ್-2025ರ ಹರಾಜು ಪ್ರಕ್ರಿಯೆಯು ನ.24 ಹಾಗೂ 25ರಂದು ಸೌದಿ ಅರೇಬಿಯದ ಜಿದ್ದಾದಲ್ಲಿ ನಡೆಯಲಿದೆ. ಭಾರತದಿಂದ ಹೊರಗೆ 2ನೇ ಬಾರಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ. 2024ರಲ್ಲಿ ದುಬೈನಲ್ಲಿ ನಡೆದಿತ್ತು.
ಹರಾಜಿನ ಅಂತಿಮ ಕಣದಲ್ಲಿ ಒಟ್ಟು 574 ಆಟಗಾರರನ್ನು ಸೇರಿಸಲಾಗಿದೆ. ಇದರಲ್ಲಿ ಭಾರತದ 48 ಹೊಸ ಆಟಗಾರರು ಹಾಗೂ ವಿದೇಶದ 193 ಹೊಸ ಆಟಗಾರರು ಸೇರಿದ್ದಾರೆ.
10 ತಂಡಗಳು ಒಟ್ಟು 46 ಆಟಗಾರರನ್ನು ತನ್ನಲ್ಲೇ ಉಳಿಸಿಕೊಂಡಿವೆ. ಕೇವಲ 204 ಸ್ಥಾನಗಳು ಭರ್ತಿ ಮಾಡಲು ಬಾಕಿ ಇದೆ. ಪ್ರತಿ ತಂಡಗಳು ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಪ್ರತಿ ತಂಡಕ್ಕೆ ಗರಿಷ್ಠ 8 ವಿದೇಶಿ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶವಿದೆ.
ದಿನಾಂಕಗಳು
ಐಪಿಎಲ್ 2025: ಮಾರ್ಚ್ 14-ಮೇ 25
ಐಪಿಎಲ್ 2026: ಮಾರ್ಚ್ 15-ಮೇ 31
ಐಪಿಎಲ್ 2027: ಮಾರ್ಚ್ 14-ಮೇ 30