ದಿಲ್ಲಿ ಅಬಕಾರಿ ನೀತಿ ಪ್ರಕರಣ | ಬಂಧನದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕವಿತಾ
ಹೊಸದಿಲ್ಲಿ : ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಭಾರತ್ ರಾಷ್ಟ್ರ ಸಮಿತಿ (ಬಿ ಆರ್ ಎಸ್) ಎಂಎಲ್ಸಿ ಕೆ. ಕವಿತಾ ಅವರು ಸೋಮವಾರ ಸುಪ್ರೀಂ ಕೋರ್ಟ್ ನ ಮೆಟ್ಟಿಲೇರಿದ್ದಾರೆ.
ಅವರ ಸಹೋದರ ಹಾಗೂ ಬಿ ಆರ್ ಎಸ್ ನಾಯಕ ಕೆ.ಟಿ. ರಾಮರಾವ್ ಅವರು ಕಸ್ಟಡಿಯಲ್ಲಿ ರವಿವಾರ ಅವರನ್ನು ಭೇಟಿಯಾದ ಬಳಿಕ ಈ ಬೆಳವಣಿಗೆ ನಡೆದಿದೆ.
ನ್ಯಾಯಾಲಯ ಅನುಮತಿ ನೀಡಿದ ಬಳಿಕ ಕೆ.ಟಿ. ರಾಮರಾವ್ ಅವರು ಕವಿತಾ ಅವರನ್ನು ಭೇಟಿಯಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
46 ವರ್ಷದ ಎಂಎಲ್ಸಿ ಕವಿತಾ ಅವರನ್ನು ಹೈದರಾಬಾದಿನ ಬಂಜಾರ ಹಿಲ್ಸ್ನಲ್ಲಿರುವ ಅವರ ನಿವಾಸದಿಂದ ಜಾರಿ ನಿರ್ದೇಶನಾಲಯ ಶುಕ್ರವಾರ ಬಂಧಿಸಿತ್ತು ಹಾಗೂ ಅನಂತರ ದಿಲ್ಲಿಗೆ ಕರೆದೊಯ್ದಿತ್ತು. ಮರು ದಿನ ಅವರನ್ನು ವಿಶೇಷ ಪಿಎಂಎಲ್ಎ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಅವರನ್ನು ಮಾರ್ಚ್ 23ರ ವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿತ್ತು.