ʼಅಗ್ನಿಪಥʼ ಯೋಜನೆಯನ್ನು ರಾಜಕೀಕರಣಗೊಳಿಸಬಾರದು ಎಂಬ ಚುನಾವಣಾ ಆಯೋಗದ ನಿರ್ದೇಶನ ತಪ್ಪು: ಕಾಂಗ್ರೆಸ್ ನಾಯಕ ಚಿದಂಬರಂ
ಹೊಸದಿಲ್ಲಿ: ಅಗ್ನಿಪಥ್ ಯೋಜನೆಯನ್ನು ರಾಜಕೀಕರಣಗೊಳಿಸಬಾರದು ಎಂದು ಚುನಾವಣಾ ಆಯೋಗವು ಸೂಚನೆ ನೀಡಿರುವುದು ತಪ್ಪು ಎಂದು ಗುರುವಾರ ಹೇಳಿರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ಸರಕಾರದ ನೀತಿಯೊಂದನ್ನು ಟೀಕಿಸುವುದು ವಿರೋಧ ಪಕ್ಷಗಳ ಹಕ್ಕಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ರಕ್ಷಣಾ ಪಡೆಗಳನ್ನು ರಾಜಕೀಕರಣಗೊಳಿಸಬಾರದು ಹಾಗೂ ಸಶಸ್ತ್ರ ಪಡೆಗಳ ಸಮಾಜೋ-ಆರ್ಥಿಕ ಸಂಯೋಜನೆಯ ಕುರಿತು ವಿಭಜನಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ಕಾಂಗ್ರೆಸ್ ಪಕ್ಷಕ್ಕೆ ಚುನಾವಣಾ ಆಯೋಗವು ಸೂಚಿಸಿತ್ತು. ಅಗ್ನಿಪಥ ಯೋಜನೆಯ ಕುರಿತು ಕಾಂಗ್ರೆಸ್ ಪಕ್ಷದ ಉನ್ನತ ನಾಯಕರು ನೀಡುತ್ತಿರುವ ಹೇಳಿಕೆಗಳ ಕುರಿತು ಚುನಾವಣಾ ಆಯೋಗ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಚಿದಂಬರಂ, ಅಗ್ನಿಪಥ ಯೋಜನೆಯನ್ನು ರಾಜಕೀಕರಣಗೊಳಿಸಬಾರದು ಎಂದು ಕಾಂಗ್ರೆಸ್ ಪಕ್ಷಕ್ಕೆ ಚುನಾವಣಾ ಆಯೋಗ ನೀಡಿರುವ ಸೂಚನೆ ತಪ್ಪು ಎಂದು ಹೇಳಿದ್ದಾರೆ.
“ರಾಜಕೀಕರಣ ಎಂದರೆ ಅರ್ಥವೇನು? ಚುನಾವಣಾ ಆಯೋಗದ ಪ್ರಕಾರ ಟೀಕಿಸುವುದೆ? ಅಗ್ನಿವೀರ್ ಒಂದು ಯೋಜನೆಯಾಗಿದ್ದು, ಸರಕಾರದ ನೀತಿಯ ಒಂದು ಉತ್ಪನ್ನವಾಗಿದೆ. ಸರಕಾರದ ನೀತಿಯೊಂದನ್ನು ಟೀಕಿಸುವುದು ಹಾಗೂ ಒಂದು ವೇಳೆ ಅಧಿಕಾರಕ್ಕೆ ಬಂದರೆ, ಅಂತಹ ಯೋಜನೆಯನ್ನು ರದ್ದುಗೊಳಿಸುವುದಾಗಿ ಘೋಷಿಸುವುದು ವಿರೋಧ ಪಕ್ಷಗಳ ಹಕ್ಕಾಗಿದೆ” ಎಂದು ಮಾಜಿ ಕೇಂದ್ರ ಹಣಕಾಸು ಸಚಿವರೂ ಆದ ಪಿ.ಚಿದಂಬರಂ ಹೇಳಿದ್ದಾರೆ.
ಒಟ್ಟಾಗಿ ಹೋರಾಡುವ ಯೋಧರ ನಡುವೆ ಅಗ್ನಿವೀರ್ ಯೋಜನೆಯು ಎರಡು ವರ್ಗಗಳನ್ನು ಸೃಷ್ಟಿಸುತ್ತದೆ ಹಾಗೂ ಇದು ತಪ್ಪಾಗಿದೆ ಎಂದೂ ಚಿದಂಬರಂ ಪ್ರತಿಪಾದಿಸಿದ್ದಾರೆ.
“ಸೇನೆಯು ಅಗ್ನಿವೀರ್ ಯೋಜನೆಯನ್ನು ವಿರೋಧಿಸಿತ್ತು. ಹೀಗಿದ್ದೂ, ಸರಕಾರ ಆ ಯೋಜನೆಯನ್ನು ಸೇನೆಯ ಮೇಲೆ ಬಲವಂತವಾಗಿ ಹೇರಿತು ಹಾಗೂ ಇದು ತಪ್ಪಾಗಿದೆ. ಹೀಗಾಗಿ ಅಗ್ನಿವೀರ್ ಯೋಜನೆಯನ್ನು ರದ್ದುಪಡಿಸಲೇಬೇಕಿದೆ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.