ಮಾಜಿ RAW ಅಧಿಕಾರಿಯ ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಿದ ಅಮೆರಿಕ: ʼವಾಂಟೆಡ್ʼ ಪೋಸ್ಟರ್ ಬಿಡುಗಡೆ ಮಾಡಿದ FBI

Update: 2024-10-18 10:31 GMT

PC : theprint.in

ಹೊಸದಿಲ್ಲಿ: ಸಿಖ್ ಪ್ರತ್ಯೇಕತಾವಾದಿ ನಾಯಕ ಗುರ್ ಪತ್ವಂತ್ ಸಿಂಗ್ ಪನ್ನುನ್ ಅವರ ಹತ್ಯೆ ಯತ್ನ ಹಿಂದಿನ ಸೂತ್ರಧಾರ ಎಂಬ ಆರೋಪಕ್ಕೆ ಗುರಿಯಾಗಿ, ಸೇವೆಯಿಂದ ವಜಾಗೊಂಡಿರುವ ಸಂಶೋಧನೆ ಮತ್ತು ವಿಶ್ಲೇಷಣಾ ದಳ(ರಾ-RAW)ದ ಮಾಜಿ ಕ್ಷೇತ್ರಕಾರ್ಯ ಏಜೆಂಟ್ ವಿಕಾಸ್ ಯಾದವ್ ವಿರುದ್ಧ ಅಮೆರಿಕ ನ್ಯಾಯಾಂಗ ಇಲಾಖೆಯು ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ.

ಈ ಸಂಬಂಧ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ ಸಂಸ್ಥೆಯು ವಿಕಾಸ್ ಯಾದವ್ ರ ಮೂರು ಚಿತ್ರಗಳಿರುವ ವಾಂಟೆಡ್ ಬಿತ್ತಿಚಿತ್ರಗಳನ್ನೂ ಬಿಡುಗಡೆ ಮಾಡಿದೆ. FBI ಪ್ರಕಾರ, ಅಕ್ಟೋಬರ್ 10ರಂದು ಅವರ ವಿರುದ್ಧ ಫೆಡರಲ್ ಬಂಧನ ವಾರೆಂಟ್ ಜಾರಿಯಾಗಿದೆ. ಅಮೆರಿಕ ತನಿಖಾ ಸಂಸ್ಥೆಗಳೇನಾದರೂ ವಿಕಾಸ್ ಯಾದವ್ ಅವರ ಗಡೀಪಾರಿಗೆ ಕೋರಿವೆಯೆ ಎಂಬ ಕುರಿತು ಭಾರತೀಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿಕಾಸ್ ಯಾದವ್ ಈಗ ಸರಕಾರಿ ನೌಕರರಾಗಿ ಉಳಿದಿಲ್ಲ ಹಾಗೂ ರಾ ಅವರನ್ನು ಹಿಂದಕ್ಕೆ ಕಳಿಸಿದ ಮೇಲೆ, ಅವರನ್ನು ಕೇಂದ್ರ ಮೀಸಲು ಪೊಲೀಸ್ ಪಡೆಯ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಆರೋಪ ಪಟ್ಟಿಯ ಪ್ರಕಾರ, ವಿಕಾಸ್, ಅಮಾನತ್ ಎಂದೂ ಕರೆಯಲಾಗುವ 39 ವರ್ಷದ ಯಾದವ್, ಗುರ್ ಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ದೋಷಾರೋಪಕ್ಕೆ ಗುರಿಯಾಗಿರುವ ಎರಡನೆ ಆರೋಪಿಯಾಗಿದ್ದಾರೆ. ಯಾದವ್ ಅವರ ಸಹ ಪಿತೂರಿಗಾರರಾದ 53 ವರ್ಷದ ನಿಖಿಲ್ ಗುಪ್ತರ ವಿರುದ್ಧ ಈ ಹಿಂದಿನ ದೋಷಾರೋಪ ಪಟ್ಟಿಯಲ್ಲಿ ಆರೋಪ ಹೊರಿಸಲಾಗಿತ್ತು ಹಾಗೂ ಅಮೆರಿಕಕ್ಕೆ ಗಡೀಪಾರು ಮಾಡಲಾಗಿತ್ತು. ಆದರೆ, ಯಾದವ್ ಇನ್ನೂ ತಲೆ ಮರೆಸಿಕೊಂಡಿದ್ದಾರೆ ಎಂದು ಅಮೆರಿಕ ನ್ಯಾಯಾಂಗ ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News