ವಯನಾಡ್ ಲೋಕಸಭಾ ಉಪಚುನಾವಣೆ: ಪ್ರಿಯಾಂಕಾ ಗಾಂಧಿ ವಿರುದ್ಧ ಹಿರಿಯ ಸಿಪಿಐ ಮುಖಂಡ ಸತ್ಯನ್ ಮೊಕೇರಿ ಕಣಕ್ಕೆ

Update: 2024-10-18 05:49 GMT

ಸತ್ಯನ್ ಮೊಕೇರಿ (Photo: Facebook)

ತಿರುವನಂತಪುರಂ: ಹಿರಿಯ ಸಿಪಿಐ ನಾಯಕ ಸತ್ಯನ್ ಮೊಕೇರಿ ಅವರು ವಯನಾಡ್ ಲೋಕಸಭಾ ಉಪಚುನಾವಣೆಗೆ ಎಲ್‌ಡಿಎಫ್ ಅಭ್ಯರ್ಥಿಯಾಗಲಿದ್ದಾರೆ. ಈ ನಿರ್ಧಾರವನ್ನು ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಗುರುವಾರ ಪ್ರಕಟಿಸಿದ್ದಾರೆ.

ಕೋಝಿಕ್ಕೋಡ್ ಜಿಲ್ಲೆಯ ನಾದಪುರಂ ಕ್ಷೇತ್ರದ ಮಾಜಿ ಶಾಸಕ ಮೊಕೇರಿ ಅವರು ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ.

ಅವರು 2014 ರಲ್ಲಿ ವಯನಾಡಿನಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ಮೊಕೇರಿ ಅವರ ಉಪಚುನಾವಣೆ ಪ್ರಚಾರಕ್ಕೆ ಶುಕ್ರವಾರ ಚಾಲನೆ ನೀಡಲಾಗುವುದು ಎಂದು ತಿಳಿದು ಬಂದಿದೆ.

ಮೊಕೇರಿ ಅವರನ್ನು ಪ್ರಮುಖ ನಾಯಕ ಎಂದು ಬಣ್ಣಿಸಿದ ಸಿಪಿಐ ಕಾರ್ಯದರ್ಶಿ ಬಿನೋಯ್ ವಿಶ್ವಂ, ರೈತ ಸಮುದಾಯದಿಂದ ದೇಶವು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಕ್ಷೇತ್ರದಲ್ಲಿ ರೈತ ನಾಯಕನನ್ನು ಕಣಕ್ಕಿಳಿಸಲಾಗುತ್ತಿದೆ ಎಂದು ಒತ್ತಿ ಹೇಳಿದರು.

ಸಹೋದರ ರಾಹುಲ್ ಗಾಂಧಿಯಿಂದ ತೆರವಾದ ವಯನಾಡ್ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

ಲೋಕಸಭೆ ಚುನಾವಣೆಯಲ್ಲಿ ವಯನಾಡ್ ಮತ್ತು ರಾಯ್ ಬರೇಲಿ ಎರಡೂ ಕ್ಷೇತ್ರಗಳಿಂದ ಗೆದ್ದ ರಾಹುಲ್, ಕೇರಳದ ವಯನಾಡ್ ಕ್ಷೇತ್ರವನ್ನು ತೆರವು ಮಾಡಲು ನಿರ್ಧರಿಸಿದ ನಂತರ ಉಪಚುನಾವಣೆ ನಡೆಯುತ್ತಿದೆ.

ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನವೆಂಬರ್ 13 ರಂದು ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.

Full View


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News