ಗುಜರಾತ್ | ಅಂಬೇಡ್ಕರ್ ಪ್ರತಿಮೆ ಧ್ವಂಸ : ಸ್ಥಳೀಯರಿಂದ ಪ್ರತಿಭಟನೆ
ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನಗರದಲ್ಲಿ ಸೋಮವಾರ ಮುಂಜಾನೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದ್ದು, ಘಟನೆಯನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆಯನ್ನು ನಡೆಸಿದ್ದಾರೆ.
ಪೊಲೀಸರು ಈ ಕುರಿತು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಗುರುತಿಸಲು ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಪರಿಶೀಲನೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಹಮದಾಬಾದ್ ನಗರದ ಖೋಖ್ರಾ ಪ್ರದೇಶದ ಶ್ರೀ ಕೆಕೆ ಶಾಸ್ತ್ರಿ ಕಾಲೇಜಿನ ಮುಂಭಾಗದಲ್ಲಿರುವ ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಯ ಮೂಗು ಮತ್ತು ಕನ್ನಡಕವನ್ನು ಹಾನಿಗೊಳಿಸಲಾಗಿದೆ. ಸೋಮವಾರ ಬೆಳಿಗ್ಗೆ 8 ಗಂಟೆಯ ಮೊದಲು ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಎನ್ ಕೆ ರಬಾರಿ ಹೇಳಿದ್ದಾರೆ.
ಈ ಕುರಿತು ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 196 ಮತ್ತು 298ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಂಬೇಡ್ಕರ್ ಪ್ರತಿಮೆಯ ಧ್ವಂಸದಿಂದ ಆಕ್ರೋಶಗೊಂಡ ಸ್ಥಳೀಯರು ಪ್ರತಿಮೆಯ ಬಳಿ ಜಮಾಯಿಸಿ ಪ್ರತಿಭಟನೆಯನ್ನು ನಡೆಸಿದ್ದಾರೆ.