ಮಹಾರಾಷ್ಟ್ರ ಚುನಾವಣೆ: ಎಂವಿಎ ಪಕ್ಷಗಳಲ್ಲಿ 263 ಸ್ಥಾನಗಳಿಗೆ ಸಹಮತ

Update: 2024-10-18 05:37 GMT

ಉದ್ಧವ್ ಠಾಕ್ರೆ | ಶರದ್ ಪವಾರ್ PC: PTI

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಒಂದು ತಿಂಗಳು ಮಾತ್ರ ಉಳಿದಿದ್ದು, ವಿರೋಧಿ ಮೈತ್ರಿಕೂಟವಾದ ಮಹಾ ವಿಕಾಸ ಅಗಾಡಿಯ ಘಟಕ ಪಕ್ಷಗಳು ಸ್ಥಾನ ಹೊಂದಾಣಿಕೆ ಒಪ್ಪಂದವನ್ನು ಬಹುತೇಕ ಪೂರ್ಣಗೊಳಿಸಿವೆ. ರಾಜ್ಯ ವಿಧಾನಸಭೆಯ 288 ಸ್ಥಾನಗಳ ಪೈಕಿ 263 ಸ್ಥಾನಗಳನ್ನು ಅಂತಿಮಪಡಿಸಲಾಗಿದ್ದು, 25 ಸ್ಥಾನಗಳ ವಿಚಾರದಲ್ಲಿ ಮಾತ್ರ ಮೂರು ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಕಾಂಗ್ರೆಸ್, ಎನ್ ಸಿಪಿಯ ಶರದ್ ಪವಾರ್ ಬಣ ಮತ್ತು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಮುಖಂಡರ ಸಭೆ ಗುರುವಾರ ನಡೆದಿದ್ದು, ಸೀಟು ಹಂಚಿಕೆ ಚರ್ಚೆಯಲ್ಲಿ ಒಳ್ಳೆಯ ಪ್ರಗತಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಾಟೋಲೆ, ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್ ಮತ್ತು ಎನ್ ಸಿಟಿ (ಎಸ್ಪಿ) ಮುಖಂಡ ಚಿತೇಂದ್ರ ಅವಧ್, ಜಯಂತ್ ಪಾಟೀಲ್ ಮತ್ತು ಅನಿಲ್ ದೇಶಮುಖ್ ಮತ್ತಿತರರು ಭಾಗವಹಿಸಿದ್ದರು.

ಸಹಮತಕ್ಕೆ ಬಾಕಿ ಇರುವ 25 ಕ್ಷೇತ್ರಗಳಲ್ಲಿ ಮುಂಬೈನ ಐದು ಕ್ಷೇತ್ರಗಳು ಸೇರಿವೆ. ಮಹಾನಗರದ 36 ಕ್ಷೇತ್ರಗಳ ಪೈಕಿ ಕುರ್ಲಾ, ಧಾರಾವಿ, ವೆರ್ಸೋವಾ ಮತ್ತು ಬೈಕುಲ್ಲಾ ಸೇರಿವೆ. ಪಟ್ಟಿಯನ್ನು ಅಂತಿಮಪಡಿಸಿ ವ್ಯಾಜ್ಯ ಇರುವ ಕ್ಷೇತ್ರಗಳ ಪಟ್ಟಿಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆಯವರಿಗೆ ಕಳುಹಿಸಲಾಗಿದೆ. ಎರಡು ಮೂರು ದಿನಗಳಲ್ಲಿ ಈ ಮುಖಂಡರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ" ಎಂದು ಮೂಲಗಳು ಸ್ಪಷ್ಟಪಡಿಸಿವೆ.

ನವೆಂಬರ್ 20ರಂದು ಒಂದೇ ಹಂತದಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ರಾಜ್ಯ ಮಾತ್ರವಲ್ಲದೇ ಇಡೀ ರಾಷ್ಟ್ರ ಈ ಕದನವನ್ನು ಕುತೂಹಲದಿಂದ ನಿರೀಕ್ಷಿಸುತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಕೂಟ 48 ಲೋಕಸಭಾ ಕ್ಷೇತ್ರಗಳ ಪೈಕಿ ಕೇವಲ 17ರಲ್ಲಿ ಜಯ ಸಾಧಿಸಿತ್ತು. ಮಹಾ ವಿಕಾಸ ಅಘಾಡಿ 30 ಸ್ಥಾನಗಳನ್ನು ಗೆದ್ದುಕೊಂಡಿತ್ತು. ವಿಧಾನಸಭಾ ಚುನಾವಣೆ ಮಹಾಯುತಿ ಸರ್ಕಾರಕ್ಕೆ ದೊಡ್ಡ ಸವಾಲಾಗಿದ್ದು, ಹರ್ಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ಬಿಜೆಪಿ ಪಾಳಯದಲ್ಲಿ ಉತ್ಸಾಹ ಮೂಡಿದೆ.

Full View

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News