ಭಾರತೀಯ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ | ಐಪಿ ಅಡ್ರೆಸ್‌ ಬ್ರಿಟನ್ ಮತ್ತು ಜರ್ಮನಿಯದ್ದು!

Update: 2024-10-17 16:48 GMT

Photo : PTI

ಹೊಸ ದಿಲ್ಲಿ: ಭಾರತೀಯ ವಿಮಾನಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ಹುಸಿ ಬಾಂಬ್ ಕರೆಗಳ ಐಪಿ ಅಡ್ರೆಸ್‌ ಗಳು ಲಂಡನ್ ಮತ್ತು ಜರ್ಮನಿಯಲ್ಲಿರುವುದನ್ನು ಕೇಂದ್ರ ಗುಪ್ತಚರ ಸಂಸ್ಥೆಗಳು ಪತ್ತೆ ಹಚ್ಚಿವೆ ಎಂದು indianexpress.com ವರದಿ ಮಾಡಿದೆ.

ಈ ವಾರ ಭಾರತೀಯ ವಿಮಾನ ಯಾನ ಸಂಸ್ಥೆಗಳ 20ಕ್ಕೂ ಹೆಚ್ಚು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳು ಬಾಂಬ್ ಬೆದರಿಕೆ ಸ್ವೀಕರಿಸಿದ್ದವು. ಸೋಮವಾರ ಭಾರತೀಯ ವಿಮಾನಯಾನ ಸಂಸ್ಥೆಗಳ ಮೂರು ವಿಮಾನಗಳು ಬಾಂಬ್ ಬೆದರಿಕೆಯನ್ನು ಸ್ವೀಕರಿಸಿದರೆ, ಮಂಗಳವಾರ ಇನ್ನೂ 10 ವಿಮಾನಗಳು ಇಂತಹುದೇ ಬೆದರಿಕೆಯನ್ನು ಸ್ವೀಕರಿಸಿದ್ದವು. ಮರುದಿನ ಅಂತಹ ಕನಿಷ್ಠ ಆರು ಬೆದರಿಕೆಗಳು ಬಂದಿದ್ದವು. ಈ ಬೆದರಿಕೆಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಬಂದಿದ್ದವು. ಪರಿಶೀಲನೆಯ ನಂತರ, ಅವೆಲ್ಲ ಹುಸಿ ಬೆದರಿಕೆ ಎಂದು ಘೋಷಿಸಲಾಗಿತ್ತು.

ಈ ಕುರಿತು ಶೋಧ ಕಾರ್ಯ ಕೈಗೆತ್ತಿಕೊಂಡಿದ್ದ ಕೇಂದ್ರ ಗುಪ್ತಚರ ಸಂಸ್ಥೆಗಳು, ಮೊದಲಿಗೆ ಅಂತಹ ಪೋಸ್ಟ್ ಗಳನ್ನು ಸೃಷ್ಟಿಸಲಾಗಿರುವ ಐಪಿ ಅಡ್ರೆಸ್‌ಗಳನ್ನು ಹಂಚಿಕೊಳ್ಳುವಂತೆ ಎಕ್ಸ್ ಸಾಮಾಜಿಕ ಮಾಧ್ಯಮ ವೇದಿಕೆಗೆ ಸೂಚಿಸಿದ್ದವು. ಇದರೊಂದಿಗೆ ಆ ಖಾತೆಗಳನ್ನು ನಿಷ್ಕ್ರಿಯಗೊಳಿಸುವಂತೆಯೂ ಎಕ್ಸ್ ಸಾಮಾಜಿಕ ಮಾಧ್ಯಮಕ್ಕೆ ಸೂಚನೆ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ ಎನ್ನಲಾಗಿದೆ.

“ನಾವು ಪ್ರಾಥಮಿಕ ವರದಿಗಳನ್ನು ಸ್ವೀಕರಿಸಿದ್ದು, ಮೂರು ಪ್ರತ್ಯೇಕ ಖಾತೆಗಳಿಂದ ಪೋಸ್ಟ್ ಗಳನ್ನು ಮಾಡಲಾಗಿದೆ ಎಂದು ನಮಗೆ ಮಾಹಿತಿ ನೀಡಲಾಗಿದೆ. ಈ ಮೂರು ಖಾತೆಗಳ ಪೈಕಿ ಎರಡು ಖಾತೆಗಳ ಐಪಿ ಅಡ್ರೆಸ್‌ಗಳನ್ನು ಕೇಂದ್ರ ಗುಪ್ತಚರ ಸಂಸ್ಥೆಗಳು ಪತ್ತೆ ಹಚ್ಚಿದ್ದು, ಆ ಎರಡೂ ಐಪಿ ಅಡ್ರೆಸ್‌ಗಳು ಲಂಡನ್ ಮತ್ತು ಡಾಯಿಚ್ ಲ್ಯಾಂಡ್ ಮೂಲದ್ದಾಗಿವೆ. ಬಳಕೆದಾರರು ತಮ್ಮ ಆನ್ ಲೈನ್ ಗುರುತನ್ನು ಮರೆಮಾಚಲು ವಿಪಿಎನ್ ನೆಟ್ ವರ್ಕ್ ಬಳಸಿಕೊಂಡು ಈ ಟ್ವೀಟ್ ಗಳನ್ನು ಮಾಡಿದ್ದಾರೆ. ಮತ್ತೊಂದು ಖಾತೆಯ ವಿವರಗಳನ್ನೂ ನಿರೀಕ್ಷಿಸಲಾಗುತ್ತಿದೆ” ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಕೇಂದ್ರ ಸರಕಾರವು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹಾಗೂ ಕಾನೂನು ಸಚಿವಾಲಯದ ಸಂಪರ್ಕದಲ್ಲಿದ್ದು, ಇತರೆ ದೇಶಗಳಲ್ಲಿ ಹುಸಿ ಬೆದರಿಕೆ ನಿಗ್ರಹ ನಿಯಮಗಳನ್ನು ಹೇಗೆ ಪಾಲಿಸಲಾಗುತ್ತಿದೆ ಎಂಬ ಕುರಿತು ಅಧ್ಯಯನವನ್ನೂ ನಡೆಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News