ಬಿಜೆಪಿ ಆಡಳಿತದಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 5,900 ಕೋಟಿ ರೂ.ನಷ್ಟ: ಕಾಂಗ್ರೆಸ್

Update: 2024-10-17 18:19 GMT

ಬೆಂಗಳೂರು: ಬಿಜೆಪಿ ಆಡಳಿತದ ಐದು ವರ್ಷಗಳಲ್ಲಿ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಸಾರಿಗೆ ಸಂಸ್ಥೆಗಳನ್ನು 5,900 ಕೋಟಿ ರೂ. ನಷ್ಟದಲ್ಲಿಟ್ಟು ಹೋಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಗುರುವಾರ ಈ ಕುರಿತು ಎಕ್ಸ್ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಬಿಜೆಪಿ ಟ್ಟೀಟ್ ಮಾಡುವುದರಲ್ಲಿ ತಮ್ಮ ಎದೆಗಾರಿಕೆ ತೋರಿಸುವುದನ್ನು ಬಿಟ್ಟು, ಸಾರಿಗೆ ಸಂಸ್ಥೆಗಳಿಗೆ 5ವರ್ಷದ ತಮ್ಮ ಅಧಿಕಾರಾವಧಿಯಲ್ಲಿ ಯಾವ ಮಹೋನ್ನತ ಸಾಧನೆ ಮಾಡಿದ್ದೀರಿ ಎಂದು ತಿಳಿಸಬೇಕು’ ಎಂದು ಪ್ರಶ್ನಿಸಿದೆ.

ಬಿಜೆಪಿಯ ಒಂದೊಂದು ಟ್ಟೀಟ್‍ಗೂ ಅಂಕಿ ಅಂಶ ಸಮೇತ ಪ್ರತ್ಯುತ್ತರ ನೀಡಿದಾಗ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಯಾಕೆಂದರೆ ಸಾರಿಗೆ ಸಂಸ್ಥೆಗಳನ್ನು ಅಧೋಗತಿ ತಂದು ನಿಲ್ಲಿಸಿರುವುದು ಬಿಜೆಪಿ ಅಧಿಕಾರಾವಧಿಯಲ್ಲಿ ಎಂಬ ಕಟುವಾದ ಸತ್ಯ ನಿಮಗೆ ತಿಳಿದಿದೆ.

ಬಿಜೆಪಿ ಸರಕಾರದ ಆಡಳಿತದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 13,888 ಹುದ್ದೆಗಳು ಖಾಲಿ ಇದ್ದರೂ ಒಂದೇ ಒಂದು ನೇಮಕಾತಿ ಮಾಡಿಲ್ಲ. ಕಾಂಗ್ರೆಸ್ ಸರಕಾರ ಬಂದ ಕೂಡಲೇ 9ಸಾವಿರ ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿದ್ದು, ಈಗಾಗಲೇ 5,800 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗಳು ವಿವಿಧ ಹಂತದಲ್ಲಿವೆ ಎಂದು ಮಾಹಿತಿ ನೀಡಿದೆ.

ಬಿಜೆಪಿ ಅವಧಿಯಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ತಿಂಗಳ ವೇತನ ಪೂರ್ಣ ಪಾವತಿಯಾಗದೆ, ಅರ್ಧವೇತನ, ಕೆಲವೊಮ್ಮೆ ಆ ವೇತನವೂ ತಿಂಗಳ ಕೊನೆಯವರೆಗೂ, ಒಮ್ಮೊಮ್ಮೆ ಮುಂದಿನ ತಿಂಗಳವರೆಗೂ ಪಾವತಿಯಾಗುತ್ತಿತ್ತು ಈ ಬಗ್ಗೆ ತಮಗೆ ಮಾಹಿತಿ ಇಲ್ಲವೇ? ನಮ್ಮ ಸರ್ಕಾರ ಬಂದ ಮೇಲೆ ನಿಗದಿತ ದಿನಾಂಕದಂದು ನೌಕರರಿಗೆ ವೇತನ ಪಾವತಿಯಾಗುತ್ತಿದೆ ಎಂದು ಹೇಳಿದೆ.

5 ವರ್ಷಗಳಲ್ಲಿ ಬಿಎಂಟಿಸಿ ಹೊರತುಪಡಿಸಿ ಬೇರೆ ಯಾವುದೇ ಸಾರಿಗೆ ನಿಗಮಗಳಿಗೆ ಬಸ್‍ಗಳ ಸೇರ್ಪಡೆಯೇ ಮಾಡದೇ, ಡಕೋಟ ಬಸ್‍ಗಳನ್ನು ಕಾರ್ಯಾಚರಣೆ ಮಾಡಲು ಬಿಟ್ಟು ಹೋಗಿದ್ದರು. ಕಾಂಗ್ರೆಸ್ ಸರಕಾರ 5,800 ಬಸ್‍ಗಳ ಸೇರ್ಪಡೆಗೆ ಅನುಮೋದನೆ ನೀಡಿದ್ದು, ಕಳೆದೊಂದು ವರ್ಷದಲ್ಲಿಯೇ 3000 ಹೊಸ ಬಸ್‍ಗಳ ಸೇರ್ಪಡೆಯಾಗಿದೆ ಎಂದು ತಿಳಿಸಿದೆ.

ಡಕೋಟಾ ಬಸ್‍ಗಳನ್ನು ಪುನಶ್ಚೇತನ ಮಾಡುವ ಕಾರ್ಯವನ್ನು ಸಹ ಕೈಗೆತ್ತಿಕೊಂಡು 1300 ಬಸ್‍ಗಳ ಪುನಶ್ಚೇತನ ಕಾರ್ಯಮಾಡಿದ್ದೇವೆ. ಒಂದು ವರ್ಷದ ಅವಧಿಯಲ್ಲಿಯೇ ತಮ್ಮ ಅವಧಿಯ ಎಲ್ಲ ಡಕೋಟಾ ಬಸ್‍ಗಳನ್ನು ಮಾರ್ಪಡಿಸಲು ಸಾಧ್ಯವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News