ಸಹಬಾಳ್ವೆಯ ಆದೇಶವನ್ನು ಪಾಲಿಸದಿದ್ದರೂ ಪತಿಯಿಂದ ಜೀವನಾಂಶಕ್ಕೆ ಪತ್ನಿ ಅರ್ಹ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಮಹತ್ವದ ತೀರ್ಪೊಂದರಲ್ಲಿ ಸರ್ವೋಚ್ಚ ನ್ಯಾಯಾಲಯವು, ಮಹಿಳೆಯು ತನ್ನ ಪತಿಯೊಂದಿಗೆ ಸಹಬಾಳ್ವೆಯನ್ನು ನಿರಾಕರಿಸಲು ಸಾಕಷ್ಟು ಮಾನ್ಯವಾದ ಕಾರಣಗಳನ್ನು ಹೊಂದಿದ್ದರೆ ಸಂಗಾತಿಯೊಂದಿಗೆ ವಾಸವಿರಬೇಕೆಂಬ ಆದೇಶವನ್ನು ಪಾಲಿಸದಿದ್ದರೂ ಆಕೆಗೆ ಪತಿಯಿಂದ ಜೀವನಾಂಶದ ಹಕ್ಕನ್ನು ನೀಡಬಹುದು ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಮತ್ತು ನ್ಯಾ.ಸಂಜಯ್ ಕುಮಾರ್ ಅವರ ಪೀಠವು, ವೈವಾಹಿಕ ಹಕ್ಕುಗಳ ಮರುಸ್ಥಾಪನೆಗಾಗಿ ಆದೇಶವನ್ನು ಪತಿಯು ಪಡೆದುಕೊಂಡಿದ್ದರೂ ಪತ್ನಿಯು ಅದಕ್ಕೆ ವಿಧೇಯಳಾಗಲು ನಿರಾಕರಿಸಿದರೆ ಮತ್ತು ಪತಿಯ ಮನೆಗೆ ಮರಳಿದರೆ ಜೀವನಾಂಶವನ್ನು ಪಡೆಯುವ ಆಕೆಯ ಹಕ್ಕು ರದ್ದಾಗುವುದಿಲ್ಲ ಎಂದು ಹೇಳಿ ಅರ್ಜಿಯನ್ನು ವಿಲೇವಾರಿಗೊಳಿಸಿತು.
ಸಿಆರ್‌ಪಿಸಿಯ ಕಲಂ 125(4)ರಡಿ,ವೈವಾಹಿಕ ಹಕ್ಕುಗಳ ಮರುಸ್ಥಾಪನೆಯ ಆದೇಶವನ್ನು ಪತ್ನಿಯು ಪಾಲಿಸದಿದ್ದರೆ ಅದು ಆಕೆಗೆ ಜೀವನಾಂಶವನ್ನು ನಿರಾಕರಿಸಲು ಸೂಕ್ತ ಕಾರಣವಾಗುತ್ತದೆಯೇ ಎಂಬ ಪ್ರಶ್ನೆಯನ್ನು ವಿವಿಧ ಉಚ್ಚ ನ್ಯಾಯಾಲಯಗಳು ಬಗೆಹರಿಸಿವೆ,ಆದರೆ ವಿಭಿನ್ನ ಮತ್ತು ವಿರೋಧಾತ್ಮಕ ಅಭಿಪ್ರಾಯಗಳಿಂದಾಗಿ ಈ ವಿಷಯದಲ್ಲಿ ಸ್ಥಿರವಾದ ದೃಷ್ಟಿಕೋನ ಮೂಡಿಬಂದಿಲ್ಲ ಎಂದು ಹೇಳಿದ ಪೀಠವು,ಹೀಗಾಗಿ ನ್ಯಾಯಾಂಗದ ಚಿಂತನೆಯು ಸಿಆರ್‌ಪಿಸಿಯ ಕಲಂ 125(4)ರಡಿ ಜೀವನಾಂಶವನ್ನು ಪಡೆಯುವ ಪತ್ನಿಯ ಹಕ್ಕನ್ನು ಎತ್ತಿ ಹಿಡಿಯುವ ಪರವಾಗಿಯೇ ಇರುತ್ತದೆ. ಕೇವಲ ಪತಿಯ ಕೋರಿಕೆಯ ಮೇರೆಗೆ ಸಹಬಾಳ್ವೆಗೆ ಆದೇಶ ಹೊರಡಿಸುವುದರಿಂದ ಮತ್ತು ಪತ್ನಿಯು ಅದನ್ನು ಪಾಲಿಸದಿರುವುದು ಆಕೆಯನ್ನು ಜೀವನಾಂಶದ ಹಕ್ಕಿನಿಂದ ಅನರ್ಹಗೊಳಿಸಲು ಸಾಲುವುದಿಲ್ಲ ಎಂದು ಹೇಳಿತು.
ಪ್ರತ್ಯೇಕವಾಗಿ ವಾಸವಾಗಿರುವ ಜಾರ್ಖಂಡ್‌ನ ದಂಪತಿಯ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ. ದಂಪತಿ 2014,ಮೇ 1ರಂದು ಮದುವೆಯಾಗಿದ್ದರು,ಆದರೆ ಆಗಸ್ಟ್ 2015ರಲ್ಲಿ ಪ್ರತ್ಯೇಕಗೊಂಡಿದ್ದರು.
ಪತ್ನಿ ಆ.21,2015ರಂದು ಮನೆ ಬಿಟ್ಟು ಹೋಗಿದ್ದು ಆಕೆಯನ್ನು ಮರಳಿ ಕರೆತರುವ ಎಲ್ಲ ಪ್ರಯತ್ನಗಳು ವಿಫಲಗೊಂಡಿವೆ ಎಂದು ರಾಂಚಿಯ ಕುಟುಂಬ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದ ಪತಿ ತನ್ನ ವೈವಾಹಿಕ ಹಕ್ಕುಗಳ ಮರುಸ್ಥಾಪನೆಗೆ ಕೋರಿಕೊಂಡಿದ್ದ. ನ್ಯಾಯಾಲಯಕ್ಕೆ ಸಲ್ಲಿಸಿದ್ದ ಲಿಖಿತ ಅರ್ಜಿಯಲ್ಲಿ ಪತ್ನಿ ತನ್ನ ಪತಿ ದ್ವಿಚಕ್ರ ವಾಹನ ಖರೀದಿಗಾಗಿ ಐದು ಲ.ರೂ.ಗಳಿಗೆ ಆಗ್ರಹಿಸಿದ್ದು,ತನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ. ಆತ ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾನೆ ಮತ್ತು ತನಗೆ ಗರ್ಭಪಾತವಾದಾಗ ತನ್ನನ್ನು ವಿಚಾರಿಸಲೂ ಬಂದಿರಲಿಲ್ಲ ಎಂದು ಆರೋಪಿಸಿದ್ದಳು.
ಮನೆಯಲ್ಲಿ ತನಗೆ ಪ್ರತ್ಯೇಕ ವಾಷ್‌ರೂಮ್ ಒದಗಿಸಿದರೆ ಮತ್ತು ಅಡಿಗೆ ಮಾಡಿಕೊಳ್ಳಲು ಎಲ್‌ಪಿಜಿ ಸ್ಟವ್ ಬಳಕೆಗೆ ಅವಕಾಶ ನೀಡಿದರೆ ತಾನು ಪತಿಯ ಮನೆಗೆ ಮರಳಲು ಸಿದ್ಧಳಿದ್ದೇನೆ ಎಂದು ಪತ್ನಿ ಹೇಳಿದ್ದಳು.
ಕುಟುಂಬ ನ್ಯಾಯಾಲಯವು ಮಾ.23,2022ರಂದು ಪತಿಯ ವೈವಾಹಿಕ ಹಕ್ಕುಗಳ ಮರುಸ್ಥಾಪನೆಗೆ ತೀರ್ಪು ಹೊರಡಿಸಿತ್ತು. ಆದರೆ ಪತ್ನಿ ಇದನ್ನು ಪಾಲಿಸಿರಲಿಲ್ಲ ಮತ್ತು ಜೀವನಾಂಶವನ್ನು ಕೋರಿ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು.
ಪತ್ನಿಗೆ ಮಾಸಿಕ 10,000 ರೂ.ಜೀವನಾಂಶ ನೀಡುವಂತೆ ಕುಟುಂಬ ನ್ಯಾಯಾಲಯವು ಪತಿಗೆ ಅದೇಶಿಸಿತ್ತು. ಪತಿ ಇದನ್ನು ಜಾರ್ಖಂಡ್ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ. ಕುಟುಂಬ ನ್ಯಾಯಾಲಯವು ಪತಿಯ ವೈವಾಹಿಕ ಹಕ್ಕುಗಳನ್ನು ಮರುಸ್ಥಾಪಿಸಿದ್ದರೂ ಪತ್ನಿ ಆತನ ಮನೆಗೆ ಮರಳಿರಲಿಲ್ಲ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡ ಉಚ್ಚ ನ್ಯಾಯಾಲಯವು ಆಕೆ ಜೀವನಾಂಶಕ್ಕೆ ಅರ್ಹಳಲ್ಲ ಎಂದು ತೀರ್ಪು ನೀಡಿತ್ತು. ಪತ್ನಿ ಇದನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಳು.
ಉಚ್ಚ ನ್ಯಾಯಾಲಯದ ತೀರ್ಪನ್ನು ತಳ್ಳಿ ಹಾಕಿದ ಸರ್ವೋಚ್ಚ ನ್ಯಾಯಾಲಯವು ಕುಟುಂಬ ನ್ಯಾಯಾಲಯದ ಜೀವನಾಂಶ ಆದೇಶವನ್ನು ಎತ್ತಿ ಹಿಡಿದಿದೆ.