ಶೇಕಡಾ 7ರಷ್ಟು ಭಾರತೀಯರು ಮಾದಕ ವ್ಯಸನಿಗಳು: ಅಮಿತ್ ಶಾ

Update: 2025-01-12 03:20 GMT

PC: x.com/AmitShah

ಹೊಸದಿಲ್ಲಿ: ದೇಶದ ಜನಸಂಖ್ಯೆಯ ಶೇಕಡಾ 7ರಷ್ಟು ಮಂದಿ ಮಾದಕ ವಸ್ತುಗಳನ್ನು ಬಳಸುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಮಾಹಿತಿ ನೀಡಿದ್ದಾರೆ. ಮಾದಕ ವಸ್ತು ಕಾನೂನು ಜಾರಿ ಏಜೆನ್ಸಿಗಳು ಮತ್ತು ಸಮಾಜ ಈ ಸವಾಲನ್ನು ಸಮರ್ಥವಾಗಿ ಎದುರಿಸಬೇಕು ಎಂದು ಕರೆ ನೀಡಿದ ಅವರು, ಈ ಪಿಡುಗನ್ನು ಅಂತ್ಯಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

"ಶೇಕಡಾ 7ರಷ್ಟು ಭಾರತೀಯರು ಮಾದಕ ವಸ್ತುಗಳನ್ನು ಕಾನೂನು ಬಾಹಿರವಾಗಿ ಬಳಸುತ್ತಾರೆ. ಮಾದಕ ವಸ್ತುಗಳ ಬಳಕೆ ದೇಶದ ಪೀಳಿಗೆಗಳನ್ನೇ ನಾಶಪಡಿಸುವ ಕ್ಯಾನ್ಸರ್ ಎನಿಸಿದೆ. ನಾವು ಅದನ್ನು ಸೋಲಿಸಬೇಕು. ಈ ಹೋರಾಟಕ್ಕೆ ಕೊಡುಗೆ ನೀಡಲು ಮತ್ತು ಗೆಲ್ಲಲು ಇದು ಸಕಾಲ. ಇಂದು ಈ ಅವಕಾಶವನ್ನು ತಪ್ಪಿಸಿಕೊಂಡರೆ, ಬಳಿಕ ಅದನ್ನು ಬಗೆಹರಿಸಲು ಸಾಧ್ಯವಿಲ್ಲ" ಎಂದು ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ 'ಮಾದಕ ವಸ್ತು ಕಳ್ಳಸಾಗಣೆ ಹಾಗೂ ರಾಷ್ಟ್ರೀಯ ಭದ್ರತೆ' ಕುರಿತ ಸಮ್ಮೇಳನದಲ್ಲಿ ಅಭಿಪ್ರಾಯಪಟ್ಟರು.

2024ರಲ್ಲಿ ಒಟ್ಟು 16,914 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ಸ್ವತಂತ್ರ ಭಾರತದಲ್ಲಿ ಒಂದು ವರ್ಷದ ಅವಧಿಯಲ್ಲಿ ವಶಪಡಿಸಿಕೊಂಡ ಅತ್ಯಧಿಕ ಮೌಲ್ಯವಾಗಿದೆ ಎಂದು ಹೇಳಿದ ಸಚಿವರು, ಇದೇ ಸಂದರ್ಭದಲ್ಲಿ ಮಾದಕ ವಸ್ತು ವಿಲೇವಾರಿ ಪಾಕ್ಷಿಕಕ್ಕೆ ಚಾಲನೆ ನೀಡಿದರು. ಈ ಅವಧಿಯಲ್ಲಿ 8600 ಕೋಟಿ ರೂಪಾಯಿ ಮೌಲ್ಯದ ಒಂದು ಲಕ್ಷ ಕಿಲೋಗ್ರಾಂ ಮಾದಕವಸ್ತುಗಳನ್ನು ನಾಶಪಡಿಸಲಾಗುತ್ತದೆ. ಮಾದಕ ವಸ್ತು ದಂಧೆಯನ್ನು ನಿರ್ಮೂಲನೆ ಮಾಡಲು ಸರ್ಕಾರ ಬದ್ಧವಾಗಿದೆ ಎಂಬ ಮಾಹಿತಿಯನ್ನು ಇದು ಸಮಾಜಕ್ಕೆ ರವಾನಿಸಲಿದೆ.

2004-14ರ ಅವಧಿಯಲ್ಲಿ 3.63 ಲಕ್ಷ ಕೆ.ಜಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದು 2014-24ರ ಅವಧಿಯಲ್ಲಿ ಏಳುಪಟ್ಟು ಹೆಚ್ಚಿ 24 ಲಕ್ಷ ಕೆ.ಜಿ. ತಲುಪಿದೆ. ಈ ಅವಧಿಯಲ್ಲಿ ನಾಶಪಡಿಸಿದ ಡ್ರಗ್ಸ್ ಮೌಲ್ಯ 8150 ಕೋಟಿ ರೂಪಾಯಿಗಳಿಂದ 56,861 ಕೋಟಿಗೆ ಹೆಚ್ಚಿದೆ ಎಂದು ಅಂಕಿ ಅಂಶ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News