ಬೈಕ್ ಕಳ್ಳತನ ಶಂಕೆ: ದಲಿತ ವ್ಯಕ್ತಿಯನ್ನು ತಲೆಕೆಳಗಾಗಿ ನೇತಾಡಿಸಿ ಹಲ್ಲೆ!

Update: 2025-01-12 02:33 GMT

ಜೈಪುರ: ಬೈಕ್ ಕದ್ದಿರಬೇಕು ಎಂಬ ಶಂಕೆಯಿಂದ ದಲಿತ ವ್ಯಕ್ತಿಯೊಬ್ಬನನ್ನು ತಲೆ ಕೆಳಗಾಗಿ ನೇತಾಡಿಸಿ, ಅಮಾನುಷವಾಗಿ ಥಳಿಸಿದ ಘಟನೆ ರಾಜಸ್ಥಾನದ ಬರ್ಮೆರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಗುಡಮಲಾನಿ ಪ್ರದೇಶದ ಭಕ್ರಾಪುರ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಮತ್ತೊಂದು ಪ್ರಕರಣದಲ್ಲಿ ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದ ಶ್ರವಣ್ ಕುಮಾರ್ ಎಂಬ ದಲಿತ ವ್ಯಕ್ತಿ ಸಂತ್ರಸ್ತ ಯುವಕ. ಸ್ಥಳೀಯ ಮೇಳವೊಂದರಲ್ಲಿ ಬೈಕ್ ಕದ್ದ ಆರೋಪದಲ್ಲಿ ಡಿಸೆಂಬರ್ 29ರಂದು ಶ್ರವಣ್ ಕುಮಾರ್ ನನ್ನು ಬಂಧಿಸಲಾಗಿತ್ತು ಎಂದು ಬರ್ಮೆರ್ ಎಸ್ಪಿ ನರೇಂದ್ರ ಸಿಂಗ್ ಮೀನಾ ಹೇಳಿದ್ದಾರೆ.

ಕೆಲ ದಿನಗಳ ಬಳಿಕ ಅತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಆತ ಮತ್ತೊಂದು ಬೈಕ್ ಕದ್ದಿದ್ದಾನೆ ಎನ್ನುವುದು ಗ್ರಾಮಸ್ಥರ ಆರೋಪ. ಆದರೆ ಈ ಆರೋಪವನ್ನು ಕುಮಾರ್ ನಿರಾಕರಿಸಿದ್ದಾನೆ.

ಶುಕ್ರವಾರ ಗ್ರಾಮಸ್ಥರು ಕುಮಾರ್ ನನ್ನು ಹಿಡಿದು ಕೈಗಳನ್ನು ಕಟ್ಟಿ ತಲೆ ಕೆಳಗಾಗಿ ಮರಕ್ಕೆ ನೇತು ಹಾಕಿ ನಿರ್ದಯವಾಗಿ ಥಳಿಸಿದ್ದಾರೆ. ಈ ಹಲ್ಲೆಯ ವಿಡಿಯೊ ಚಿತ್ರೀಕರಣವನ್ನೂ ಮಾಡಲಾಗಿದ್ದು, ಇದು ವೈರಲ್ ಆಗಿದೆ ಎಂದು ಮೂಲಗಳು ಹೇಳಿವೆ.

ಸಂತ್ರಸ್ತ ವ್ಯಕ್ತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಮತ್ತು 53 ಸೆಕೆಂಡಿನ ವಿಡಿಯೊ ತುಣುಕನ್ನು ಪೊಲೀಸರು ಪರಿಶೀಲಿಸಿದ ಬಳಿಕ ಪ್ರಕರಣ ದಾಖಲಿಸಲಾಗಿದೆ ಎಂದು ಗುಡಮಲಾನಿ ಡಿವೈಎಸ್ಪಿ ಸುಖರಾಂ ಬಿಷ್ಣೋಯಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News