13ರ ಬಾಲಕಿಯನ್ನು ದಾನವಾಗಿ ಸ್ವೀಕರಿಸಿದ ಆರೋಪ: ಮಹಾಂತ ಕೌಶಲಗಿರಿ ಉಚ್ಚಾಟನೆ

Update: 2025-01-12 02:57 GMT

ಮಹಾಂತ ಕೌಶಲಗಿರಿ PC: x.com/ABPNews

ಆಗ್ರಾ: ಹದಿಮೂರು ವರ್ಷ ವಯಸ್ಸಿನ ಬಾಲಕಿಯನ್ನೇ ಆಕೆಯ ಕುಟುಂಬದಿಂದ ದಾನವಾಗಿ ಸ್ವೀಕರಿಸಿ ಕುಂಭ ಮೇಳದ ಮೊದಲ ಸ್ನಾನದ ಸಂದರ್ಭದಲ್ಲಿ ಆಕೆಯನ್ನು ಸಾಧ್ವಿಯಾಗಿ ರೂಪಿಸುವ ಪ್ರಕ್ರಿಯೆ ಆರಂಭಿಸಲು ಮುಂದಾದ ಆರೋಪದಲ್ಲಿ ಮಹಾಂತ ಕೌಶಲಗಿರಿ ಅವರನ್ನು ಹಿಂದೂ ಸಮಾಜದ ಅತ್ಯುನ್ನತ ಸನ್ಯಾಸಿ ಸಂಘಟನೆ ಜುನಾ ಅಖಾಡಾ ಏಳು ವರ್ಷಗಳ ಅವಧಿಗೆ ಉಚ್ಚಾಟಿಸಿದೆ.

ಶುಕ್ರವಾರ ಸಂಜೆ ಬಾಲಕಿಯನ್ನು ಕುಟುಂಬಕ್ಕೆ ಮರಳಿಸಲಾಗಿದ್ದು, ಮಹಿಳೆಯರು ಸನ್ಯಾಸಿನಿಯಾಗಲು ಕನಿಷ್ಠ ವಯಸ್ಸಿನ ಮಿತಿಯನ್ನು 22 ವರ್ಷಕ್ಕೆ ನಿಗದಿಪಡಿಸಿರುವುದಾಗಿ ಅಖಾಡಾದ ಹಿರಿಯ ಪದಾಧಿಕಾರಿಗಳು ಹೇಳಿದ್ದಾರೆ.

ಆದರೆ ಪ್ರಾಪಂಚಿಕ ಬದುಕು ತ್ಯಜಿಸುವ ಬಾಲಕಿಯ ಇಚ್ಛೆಯಂತೆ ಆಕೆಯ ತಂದೆ ತಮ್ಮ ಸ್ವ-ಇಚ್ಛೆಯಿಂದ ಪುತ್ರಿಯನ್ನು ಅಖಾಡಾಗೆ ನೀಡಿದ್ದಾಗಿ ಗಿರಿ ಸಮರ್ಥಿಸಿಕೊಂಡಿದ್ದಾರೆ. "ಆಕೆಯ ಪೋಷಕರಿಂದ ಯಾವುದೇ ಆಕ್ಷೇಪ ಇರಲಿಲ್ಲ. ಧರ್ಮಧ್ವಜ ಮತ್ತು ಪಿಂಡದಾನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬಳಿಕ, ಆಕೆ ಸಂತತ್ವವನ್ನು ಅಧಿಕೃತವಾಗಿ ಸ್ವೀಕರಿಸಲಿದ್ದಾರೆ" ಎಂದು ಗಿರಿ ಸ್ಪಷ್ಟಪಡಿಸಿದ್ದಾರೆ.

ಈ ಘಟನೆ ಬಗ್ಗೆ ಅಗ್ರ ಸಂತರಿಂದ ಆಕ್ಷೇಪಣೆಗಳು ಬಂದ ಬೆನ್ನಲ್ಲೇ ವಿವಾದ ಇತ್ಯರ್ಥಪಡಿಸುವ ಸಲುವಾಗಿ ಪೋಷಕರಾದ ಸಂತ ಶ್ರೀಮಹಾಂತ ಗಿರಿ, ವಕ್ತಾರ ನಾರಯಣ ಗಿರಿ, ಮೇಳದ ಉಸ್ತುವಾರಿ ಮೋಹನ್ ಭಾರ್ತಿ ಮತ್ತು ಇತರರು ಸೇರಿದಂತೆ ಅಖಾಡಾದ ಹಿರಿಯ ಪದಾಧಿಕಾರಿಗಳು ಸಭೆ ನಡೆಸಿದರು. ನೈತಿಕ ಮತ್ತು ಕಾನೂನಾತ್ಮಕ ರೂಢಿಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಕೌಶಲಗಿರಿಯವರನ್ನು ಉಚ್ಚಾಟಿಸುವ ಅವಿರೋಧ ನಿರ್ಣಯ ಆಂಗೀಕರಿಸಲಾಯಿತು ಎಂದು ಹೇಳಲಾಗಿದೆ.

"ಬಾಲಕಿ ಅಪ್ರಾಪ್ತ ವಯಸ್ಸಿನವಳು ಹಾಗೂ ಇದು ಸ್ವೀಕಾರಾರ್ಹವಲ್ಲ. ಆಕೆಯನ್ನು ಮನೆಗೆ ಮರಳಿಸಲು ನಾವು ನಿರ್ಧರಿಸಿದ್ದೇವೆ. ಪರಿತ್ಯಕ್ತ ಶಿಶು ಕಂಡುಬಂದರೆ ಮಾತ್ರ ನಾವು ದತ್ತು ಸ್ವೀಕರಿಸುತ್ತೇವೆ; ಇಲ್ಲದಿದ್ದರೆ ಸಾಮಾನ್ಯ ಸಂದರ್ಭಗಳಲ್ಲಿ 22 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರನ್ನು ಸೇರಿಸಿಕೊಳ್ಳುವುದಿಲ್ಲ. ಈ ವಯೋಮಿತಿಯು ಮಹಿಳೆಯರು ಸಂತತ್ವವನ್ನು ಪಡೆಯುವ ಮಾಹಿತಿಯುಕ್ತ ಪ್ರೌಢ ನಿರ್ಧಾರ ಕೈಗೊಳ್ಳುವುದನ್ನು ಖಾತರಿಪಡಿಸುತ್ತದೆ. ಮಕ್ಕಳನ್ನು ನಮ್ಮ ಶಿಬಿರಗಳಲ್ಲಿ ಇರಿಸಿಕೊಳ್ಳುವಂತಿಲ್ಲ ಹಾಗೂ ಸಂಬಂಧಪಟ್ಟವರು ಮಧ್ಯಪ್ರವೇಶಿಸಿ ಮತ್ತೆ ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲು ಕೋರಿದ್ದೇವೆ" ಎಂದು ವಕ್ತಾರ ನಾರಾಯಣಗಿರಿ ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News