ಮಧುರೈ-ತೂತುಕುಡಿ ರೈಲು ಯೋಜನೆ ಸ್ಥಗಿತ: ಕೇಂದ್ರ-ತಮಿಳು ನಾಡು ಸರಕಾರದ ನಡುವೆ ಆರೋಪ, ಪ್ರತ್ಯಾರೋಪ
ಚೆನ್ನೈ: ತಮಿಳುನಾಡಿನಲ್ಲಿ ರದ್ದಾಗಿರುವ ಮಧುರೈ ಮತ್ತು ತೂತುಕುಡಿ ರೈಲು ಯೋಜನೆಯು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ವಿವಾದಕ್ಕೆ ಕಾರಣವಾಗಿದೆ. ತಮಿಳುನಾಡಿನ ದಕ್ಷಿಣ ಜಿಲ್ಲೆಗಳಾದ ಮಧುರೈ ಮತ್ತು ತೂತುಕುಡಿಯನ್ನು ಸಂಪರ್ಕಿಸುವ ಯೋಜನೆಯನ್ನು ಮುಂದುವರಿಸಲು ರಾಜ್ಯ ಸರ್ಕಾರ ಸಿದ್ಧವಾಗಿಲ್ಲ. ಡಿಎಂಕೆ ಸರ್ಕಾರ ಈ ಕುರಿತು ಲಿಖಿತವಾಗಿ ಮನವಿ ನೀಡಿದ್ದರಿಂದ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂಬ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರ ಹೇಳಿಕೆಯನ್ನು ಡಿಎಂಕೆ ಬಲವಾಗಿ ನಿರಾಕರಿಸಿದೆ.
ಚೆನ್ನೈನ ಐಸಿಎಫ್ ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ರಾಜಕೀಯ ಬಿಟ್ಟು ಜನರ ಸೇವೆ ಮಾಡಬೇಕು. ರೈಲು ಯೋಜನೆಗಳಿಗೆ ಭೂಸ್ವಾಧೀನಕ್ಕೆ ನಮಗೆ ರಾಜ್ಯ ಸರ್ಕಾರದ ಬೆಂಬಲ ಬೇಕು, ರಾಜಕೀಯ ಬದಿಗಿಟ್ಟು ಜನರಿಗೆ ಸೌಲಭ್ಯಗಳನ್ನು ಒದಗಿಸಬೇಕು, ನಾವು ಮೊದಲು ಜನರ ಕಲ್ಯಾಣಕ್ಕೆ ಪ್ರಾಶಸ್ತ್ಯವನ್ನು ನೀಡಬೇಕು ಎಂದು ಹೇಳಿದ್ದಾರೆ.
ಡಿಎಂಕೆಯ ಯುವ ಘಟಕ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರ ಆರೋಪವನ್ನು ನಿರಾಕರಿಸಿದೆ. ಸಚಿವರ ಹೇಳಿಕೆ ಸುಳ್ಳು ಎಂದು ಹೇಳಿ ಆಗಸ್ಟ್ ನಲ್ಲಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಯೋಜನೆಗೆ ಹಣವನ್ನು ಕೋರಿದ್ದ ಪತ್ರವನ್ನು ಹಂಚಿಕೊಂಡಿದೆ. ಯೋಜನೆಯೊಂದರ ಕುರಿತು ಸಿಎಂ ಪತ್ರ ಬರೆದಾಗ ರೈಲ್ವೇ ಇಲಾಖೆ ಕ್ಷುಲ್ಲಕ ಕಾರಣಗಳನ್ನು ನೀಡಿ ಮನವಿಯನ್ನು ತಿರಸ್ಕರಿಸಿದ್ದು ಏಕೆ ಎಂದು ಡಿಎಂಕೆ ಯುವ ಘಟಕ ಪ್ರಶ್ನಿಸಿದೆ.
ತಮಿಳುನಾಡಿನ ರಾಜ್ಯ ಸಾರಿಗೆ ಸಚಿವ ಎಸ್ ಎಸ್ ಶಿವಶಂಕರ್ ಈ ಕುರಿತು ಪ್ರತಿಕ್ರಿಯಿಸಿದ್ದು, ತಮ್ಮ ಸರ್ಕಾರವು ಯೋಜನೆಯನ್ನು ಹಿಂತೆಗೆದುಕೊಳ್ಳುವಂತೆ ಲಿಖಿತವಾಗಿ ಅಥವಾ ಮೌಖಿಕವಾಗಿ ಎಂದಿಗೂ ಕೇಳಿಲ್ಲ. ಇಂತಹ ವ್ಯತಿರಿಕ್ತ ಹೇಳಿಕೆಗಳು ತಮಿಳುನಾಡಿನ ಬಗ್ಗೆ ಕೇಂದ್ರದ ತಾರತಮ್ಯವನ್ನು ಬಯಲು ಮಾಡುತ್ತದೆ ಎಂದು ಹೇಳಿದ್ದಾರೆ.