ಕಳೆದ ತಿಂಗಳು ಉತ್ಖನನದಲ್ಲಿ ಬೆಳಕಿಗೆ ಬಂದ ಮೆಟ್ಟಿಲುಬಾವಿಯ ಮೇಲೆ ಅತಿಕ್ರಮಣ ಆರೋಪ: ಸಂಭಲ್‌ನಲ್ಲಿ ಒಂದೇ ಗಂಟೆಯಲ್ಲಿ ಕುಟುಂಬವನ್ನು ತೆರವುಗೊಳಿಸಿದ ಆಡಳಿತ

Update: 2025-01-12 11:30 GMT

PC :PTI 

ಬರೇಲಿ,: ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಚಂದೌಸಿ ಪಟ್ಟಣದಲ್ಲಿ ವಿಧವೆ, ಆಕೆಯ ಪುತ್ರ ಮತ್ತು ಪುತ್ರಿಯನ್ನು ಮನೆಯಿಂದ ಬಲವಂತದಿಂದ ತೆರವುಗೊಳಿಸಲಾಗಿದ್ದು, ಅವರೀಗ ಕುಟುಂಬ ಸ್ನೇಹಿತರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಕಳೆದ ತಿಂಗಳು ಉತ್ಖನನದಲ್ಲಿ ಬೆಳಕಿಗೆ ಬಂದಿರುವ ‘ಐತಿಹಾಸಿಕ’ ಮೆಟ್ಟಲುಬಾವಿಯ ಪ್ರವೇಶ ದ್ವಾರವನ್ನು ಅತಿಕ್ರಮಿಸಿ ಮನೆಯನ್ನು ನಿರ್ಮಿಸಲಾಗಿದೆ ಎಂಬ ಕಾರಣದಲ್ಲಿ ತೆರವು ನೋಟಿಸನ್ನು ನೀಡಿದ ಒಂದೇ ಗಂಟೆಯೊಳಗೆ ಅಧಿಕಾರಿಗಳು ಕುಟುಂಬವನ್ನು ಒಕ್ಕಲೆಬ್ಬಿಸಿದ್ದಾರೆ.

ಗುಲ್‌ನವಾಝ್ ಬಿ.(54) ಅವರ ಕುಟುಂಬವು ತನ್ನ ಭೂಮಿಯ ದಾಖಲೆಗಳನ್ನು ಫೋರ್ಜರಿ ಮಾಡಿತ್ತು ಮತ್ತು ಮನೆಯನ್ನು ತೆರವುಗೊಳಿಸುವಂತೆ ಮೂರು ವಾರಗಳ ಹಿಂದೆಯೇ ತಿಳಿಸಲಾಗಿತ್ತು. ಶುಕ್ರವಾರ ಸಂಜೆ ನಗರಸಭೆಯು ಮನೆಯನ್ನು ತೆರವುಗೊಳಿಸಲು 24 ಗಂಟೆಗಳ ಗಡುವು ನೀಡಿತ್ತು. ಆದರೆ ಆಡಳಿತಾತ್ಮಕ ಒತ್ತಡಗಳಿಂದಾಗಿ ಅವರನ್ನು ತಕ್ಷಣ ತೆರವುಗೊಸುವುದು ತಮಗೆ ಅನಿವಾರ್ಯವಾಗಿತ್ತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ಉತ್ತರ ಪ್ರದೇಶ ಸಾರ್ವಜನಿಕ ಆವರಣಗಳು(ಅನಧಿಕೃತ ನಿವಾಸಿಗಳ ತೆರವು) ಕಾಯ್ದೆ,1972ರಡಿ ನಿವಾಸಿಗಳಿಗೆ ಉತ್ತರಿಸಲು ಕನಿಷ್ಠ 10 ದಿನಗಳ ಸಮಯಾವಕಾಶವನ್ನು ನೀಡಬೇಕಾಗುತ್ತದೆ. ಉತ್ತರ ಪ್ರದೇಶ ನಗರ ಯೋಜನಾ ಮತ್ತು ಅಭಿವೃದ್ಧಿ ಕಾಯ್ದೆ,1973ರಡಿ ಅನಧಿಕೃತ ನಿವಾಸಿಗಳಿಗೆ ನೋಟಿಸ್‌ಗಳು ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಅಥವಾ ಮೇಲ್ಮನವಿ ಸಲ್ಲಿಸಲು ಸಾಮಾನ್ಯವಾಗಿ 15ರಿಂದ 40 ದಿನಗಳ ಕಾಲಾವಕಾಶವನ್ನು ನೀಡುತ್ತವೆ.

24 ಗಂಟೆಯಲ್ಲಿ ಮನೆಯನ್ನು ತೆರವುಗೊಳಿಸುವಂತೆ ಗುಲ್‌ನವಾಝ್ ಅವರಿಗೆ ಶುಕ್ರವಾರ ಸಂಜೆ ಸುಮಾರು ಐದು ಗಂಟೆಗೆ ನೋಟಿಸ್ ನೀಡಲಾಗಿತ್ತು, ಆದರೆ ಸಂಜೆ ಆರು ಗಂಟೆಗೆ ಬುಲ್ಡೋಜರ್‌ನೊಂದಿಗೆ ಆಗಮಿಸಿದ ಅಧಿಕಾರಿಗಳ ತಂಡವು ಕುಟುಂಬವನ್ನು ಮನೆಯಿಂದ ಹೊರಹಾಕಿದೆ. ಮೆಟ್ಟಿಲು ಬಾವಿಯ ಪ್ರವೇಶ ದ್ವಾರವು ಮನೆಯ ಕೆಳಗಿರುವುದರಿಂದ ಮನೆಯನ್ನು ನೆಲಸಮಗೊಳಿಸುವುದು ಅಗತ್ಯವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಗುಲ್‌ನವಾಝ್ ಹತಾಶೆಯನ್ನು ವ್ಯಕ್ತಪಡಿಸಿ,‘ನಾನು ನನ್ನ ಮನೆಯನ್ನು ಕಳೆದುಕೊಂಡಿದ್ದೇನೆ ಮತ್ತು ಯಾವುದೇ ಪರಿಹಾರದ ಭರವಸೆಯನ್ನು ನೀಡಲಾಗಿಲ್ಲ. ನನ್ನ ಮಗ ನಮ್ಮ ಮನೆಯನ್ನು ಪುನಃ ನಿರ್ಮಿಸಲು ಹೇಗೆ ಸಾಧ್ಯ? ಭೂಮಿಯನ್ನು ನಮಗೆ ಮಾರಾಟ ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅಧಿಕಾರಿಗಳು ನಮಗೆ ತಿಳಿಸಿದ್ದಾರೆ,ಆದರೆ ಎಲ್ಲಿಂದ ಆರಂಭಿಸಬೇಕು ಎನ್ನುವುದು ನಮಗೆ ತಿಳಿದಿಲ್ಲ ’ಎಂದರು.

‘ಬಡಗಿಯಾಗಿದ್ದ ನಮ್ಮ ತಂದೆ 2017ರಲ್ಲಿ ಈ ಮನೆಯನ್ನು ನಿರ್ಮಿಸಿದ್ದರು. ನಮ್ಮ ತಾಯಿ ಹೊಲಿಗೆ ಕೆಲಸ ಮಾಡುವ ಮೂಲಕ ಕುಟುಂಬ ನಿರ್ವಹಣೆಗೆ ನೆರವಾಗುತ್ತಿದ್ದಾರೆ. ಈ ಕೊರೆಯುವ ಚಳಿಯಲ್ಲಿ ಎಲ್ಲಿಗೆ ಹೋಗಬೇಕು ಎನ್ನುವುದು ನಮಗೆ ತಿಳಿದಿಲ್ಲ,ನಾವು ಸಹಾಯಕ್ಕಾಗಿ ಆಡಳಿತವನ್ನು ಕೋರಿಕೊಂಡಿದ್ದೇವೆ ’ ಎಂದು ಗುಲ್‌ನವಾಝ್‌ರ ಪುತ್ರ ಶಾಕೀಬ್(35) ಹೇಳಿದರು.

ಮನೆಯ ನೋಂದಣಿ ದಾಖಲೆಗಳು ನಕಲಿಯಾಗಿವೆ ಮತ್ತು ಆಸ್ತಿಯನ್ನು ಮೋಸದಿಂದ ಮಾರಾಟ ಮಾಡಲಾಗಿತ್ತು. ಈ ಬಗ್ಗೆ ಗುಲ್‌ನವಾಝ್ ಕುಟುಂಬಕ್ಕೆ 20-25 ದಿನಗಳ ಹಿಂದೆ ಮೌಖಿಕವಾಗಿ ತಿಳಿಸಲಾಗಿತ್ತು ಮತ್ತು ತಾವೇ ಖುದ್ದಾಗಿ ಮನೆಯನ್ನು ನೆಲಸಮಗೊಳಿಸುವುದಾಗಿ ಅವರು ಒಪ್ಪಿಕೊಂಡಿದ್ದರು. ಅವರ ಹೆಸರುಗಳನ್ನು ಈಗ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಅರ್ಹರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಸಂಭಲ್ ಜಿಲ್ಲಾಧಿಕಾರಿ ರಾಜೇಂದ್ರ ಪೆನ್ಸಿಯಾ ತಿಳಿಸಿದರು.

ಅಕ್ರಮ ಒತ್ತುವರಿ ದೂರುಗಳ ಹಿನ್ನಲೆಯಲ್ಲಿ ಉತ್ಖನನದ ಸಂದರ್ಭ ಡಿ.21ರಂದು ಮೆಟ್ಟಿಲುಬಾವಿ ಪತ್ತೆಯಾಗಿತ್ತು. ಈ ಐತಿಹಾಸಿಕ ರಚನೆಯ ಮೂರು ಅಂತಸ್ತುಗಳನ್ನು ಈವರೆಗೆ ಅನಾವರಣಗೊಳಿಸಲಾಗಿದೆ,ಆದರೆ ಮೆಟ್ಟಿಲುಬಾವಿಯ ಒಂದು ಭಾಗವು ಸಮೀಪದ ಮನೆಗಳ ಅಡಿಯಲ್ಲಿರುವುದು ಕಂಡು ಬಂದ ಬಳಿಕ ಉತ್ಖನನ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಪರಿಶೀಲನೆಗಾಗಿ ದಾಖಲೆಗಳನ್ನು ಸಲ್ಲಿಸುವಂತೆ ಅಲ್ಲಿಯ ನಿವಾಸಿಗಳಿಗೆ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿತ್ತು.

ಜಲ ಸಂರಕ್ಷಣೆಯಲ್ಲಿ ಮೆಟ್ಟಿಲುಬಾವಿಯು ಮಹತ್ವದ್ದಾಗಿದೆ. ಗೋಡೆಗಳಲ್ಲಿ ಬಿರುಕುಗಳು ಕಂಡು ಬಂದಿದ್ದು,ಹತ್ತಿರದ ಕಟ್ಟಡಗಳ ಅವಶೇಷಗಳು ಅದರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ. ಮೆಟ್ಟಲುಬಾವಿಯ ಭೂಮಿಯಲ್ಲಿ ಯಾವುದೇ ನಿರ್ಮಾಣಕ್ಕೆ ಅನುಮತಿಯಿಲ್ಲ ಎಂದು ಉತ್ಖನನ ಕಾರ್ಯದಲ್ಲಿ ತೊಡಗಿಸಿಕೊಂಡ ಅಧಿಕಾರಿಯೋರ್ವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News