ಛತ್ತೀಸ್ ಗಢ | ಭದ್ರತಾ ಪಡೆಗಳ ಎನ್ಕೌಂಟರ್ ಗೆ ಮೂವರು ನಕ್ಸಲರು ಬಲಿ
ರಾಯ್ಪುರ: ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ರವಿವಾರ ಭದ್ರತಾ ಸಿಬ್ಬಂದಿಗಳ ಎನ್ ಕೌಂಟರ್ ಗೆ ಮೂವರು ನಕ್ಸಲರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ರಿಸರ್ವ್ ಗಾರ್ಡ್ (ಡಿ ಆರ್ ಜಿ), ವಿಶೇಷ ಕಾರ್ಯಪಡೆ(ಎಸ್ ಟಿಎಫ್) ಸಿಬ್ಬಂದಿಗಳು ಸೇರಿದಂತೆ ಭದ್ರತಾ ಸಿಬ್ಬಂದಿಗಳ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಅರಣ್ಯದಲ್ಲಿ ಬೆಳಿಗ್ಗೆ ಗುಂಡಿನ ಚಕಮಕಿ ನಡೆಯಿತು ಎಂದು ಬಸ್ತಾರ್ ರೇಂಜ್ ನ ಐಜಿಪಿ ಸುಂದರರಾಜ್ ಪಿ ತಿಳಿಸಿದ್ದಾರೆ.
ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ಸಮವಸ್ತ್ರಧಾರಿ ಮೂವರು ನಕ್ಸಲರ ಮೃತದೇಹಗಳು ಪತ್ತೆಯಾಗಿದೆ. ಸ್ಥಳದಿಂದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2025ರ ವರ್ಷದ ಆರಂಭದಲ್ಲೇ ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ 12 ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಜನವರಿ 6ರಂದು ನಾರಾಯಣಪುರ-ದಂತೇವಾಡ-ಬಿಜಾಪುರ ಜಿಲ್ಲೆಗಳ ಗಡಿಯಲ್ಲಿರುವ ಅಬುಜ್ಮದ್ ನಲ್ಲಿ ಭದ್ರತಾ ಪಡೆಗಳು ನಡೆಸಿದ ಮೂರು ದಿನಗಳ ಸುದೀರ್ಘ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಐವರು ನಕ್ಸಲಿಯರು ಮೃತಪಟ್ಟಿದ್ದರು. ಜನವರಿ 9ರಂದು ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್ ಕೌಂಟರ್ ನಲ್ಲಿ ಮೂವರು ನಕ್ಸಲರು ಮೃತಪಟ್ಟಿದ್ದರು. ಇದಕ್ಕೂ ಮುನ್ನ ಜನವರಿ 3ರಂದು ರಾಯ್ಪುರ ವಿಭಾಗದ ಗರಿಯಾಬಂದ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್ ಕೌಂಟರ್ ನಲ್ಲಿ ಓರ್ವ ನಕ್ಸಲಿಯನ ಹತ್ಯೆ ನಡೆದಿತ್ತು.