ಮುಂಬೈ | 'ಟೋರಸ್ ಚಿನ್ನಾಭರಣ' ಭಾರಿ ವಂಚನೆ ಪ್ರಕರಣದಲ್ಲಿ ಉಕ್ರೇನ್ ಪ್ರಜೆಗಳ ಕೈವಾಡ : ವರದಿ

Update: 2025-01-12 13:46 GMT

Photo | NDTV

ಮುಂಬೈ: ಹೂಡಿಕೆಗೆ ಭಾರಿ ಪ್ರಮಾಣದ ಹಿಂಪಾವತಿ ನೀಡಲಾಗುವುದು ಎಂದು ನಂಬಿಸಿ, ನೂರಾರು ಮುಂಬೈ ನಿವಾಸಿಗಳನ್ನು ವಂಚಿಸಿದ ಪೊಂಜಿ ವಂಚನೆ ಪ್ರಕರಣದಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ಉಕ್ರೇನ್ ಪ್ರಜೆಗಳ ಕೈವಾಡವಿರುವುದು ತನಿಖೆಯ ಸಂದರ್ಭದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ವಿಭಾಗವು ಟೋರಸ್ ಚಿನ್ನಾಭರಣ ಹಗರಣದಲ್ಲಿ ಉಕ್ರೇನ್ ಪ್ರಜೆಗಳಾದ ಆರ್ಟೆಮ್ ಹಾಗೂ ಒಲೆನಾ ಸ್ಟೊಯ್ನ್ ಪಾತ್ರವಿರುವುದನ್ನು ಪತ್ತೆ ಹಚ್ಚಿದ್ದು, ಅವರ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಕಲ್ಲಿನ ಹರಳುಗಳು, ಚಿನ್ನ ಹಾಗೂ ಬೆಳ್ಳಿ ಹೂಡಿಕೆಯಲ್ಲಿ ಭಾರಿ ಪ್ರಮಾಣದ ಹಿಂಪಾವತಿ ಆಮಿಷವೊಡ್ಡಿರುವುದರಲ್ಲಿ ಅವರಿಬ್ಬರೂ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.

ಹೂಡಿಕೆದಾರರಿಗೆ ಅದೃಷ್ಟದ ಬಹುಮಾನಗಳನ್ನಾಗಿ 14 ಐಶಾರಾಮಿ ಕಾರುಗಳನ್ನು ನೀಡಿರುವುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೂಡಿಕೆಯತ್ತ ಹೆಚ್ಚು ಗ್ರಾಹಕರನ್ನು ಆಕರ್ಷಿಸುವ ಗುರಿಯಿಂದ ಕಾರುಗಳನ್ನು ನೀಡಲಾಗಿದೆ ಎನ್ನಲಾಗಿದೆ.  

ದೊಡ್ಡ ಮಟ್ಟದ ಹಿಂಪಾವತಿ ಮಾಡುವ ಯೋಜನೆಯ ಭರವಸೆಯೊಂದಿಗೆ ಕೋಟ್ಯಂತರ ರೂ. ಹೂಡಿಕೆಯನ್ನು ಪಡೆದಿದ್ದ ಟೋರಸ್ ಚಿನ್ನಾಭರಣ ಜಾಲವು ಮುಚ್ಚಿ ಹೋದ ನಂತರ, ವಿಶ್ವಾದ್ಯಂತ ಇರುವ ನೂರಾರು ಹೂಡಿಕೆದಾರರು ತಮಗೆ ವಂಚನೆಯಾಗಿರುವ ಕುರಿತು ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ, ಈ ವಂಚನೆಗೆ ಪ್ಲಾಟಿನಂ ಹರ್ನ್ ಪ್ರೈವೇಟ್ ಲಿಮಿಟೆಡ್, ಅದರ ಇಬ್ಬರು ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಧಾನ ವ್ಯವಸ್ಥಾಪಕರು ಹಾಗೂ ಉಗ್ರಾಣ ಮೇಲ್ವಿಚಾರಕನೊಬ್ಬನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಆರೋಪಿಗಳ ವಿರುದ್ಧ ವಂಚನೆ ಹಾಗೂ ಕ್ರಿಮಿನಲ್ ಪಿತೂರಿ ಸೇರಿದಂತೆ ಹಲವು ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News