ದಿಲ್ಲಿ ವಿಧಾನಸಭಾ ಚುನಾವಣೆ | ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ
ಹೊಸದಿಲ್ಲಿ: ಮುಂಬರುವ ದಿಲ್ಲಿ ವಿಧಾನಸಭಾ ಚುನಾವಣೆಗಾಗಿ ತನ್ನ 29 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಜೆಪಿ ಬಿಡುಗಡೆಗೊಳಿಸಿದೆ. ಇದರೊಂದಿಗೆ 70 ಸದಸ್ಯಬಲದ ವಿಧಾನಸಭೆಗಾಗಿ ಬಿಜೆಪಿ ಪ್ರಕಟಿಸಿರುವ ಅಭ್ಯರ್ಥಿಗಳ ಸಂಖ್ಯೆ 58ಕ್ಕೇರಿದೆ.
ದಿಲ್ಲಿ ವಿಧಾನಸಭಾ ಚುನಾವಣೆಯು ಫೆ.5ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಫೆ.8ರಂದು ಮತಗಳ ಎಣಿಕೆ ನಡೆಯಲಿದೆ.
ಬಿಜೆಪಿ ಕರಾವಲ್ ನಗರದಲ್ಲಿ ತನ್ನ ಹಾಲಿ ಶಾಸಕ ಮೋಹನ ಸಿಂಗ್ ಬಿಷ್ಟ್ ಬದಲು ಆಪ್ ಸರಕಾರದ ಮಾಜಿ ಸಚಿವ ಕಪಿಲ್ ಶರ್ಮಾರನ್ನು ಕಣಕ್ಕಿಳಿಸಿದೆ.
ಮಿಶ್ರಾ 2015ರಲ್ಲಿ ಕರಾವಲ್ ನಗರದಿಂದ ಆಪ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆಗಸ್ಟ್ 2019ರಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. 2023ರಲ್ಲಿ ಅವರನ್ನು ಪಕ್ಷದ ದಿಲ್ಲಿ ಘಟಕದ ಉಪಾಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿತ್ತು.
2020, ಫೆ.3ರಂದು ಜಫ್ರಾಬಾದ್‌ನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ಭಾಷಣವನ್ನು ಮಾಡುವ ಮೂಲಕ ಮಿಶ್ರಾ ಸುದ್ದಿಯಾಗಿದ್ದರು. ಪ್ರತಿಭಟನಾಕಾರರನ್ನು ತೆರವುಗೊಳಿಸುವಂತೆ ಪೋಲಿಸರಿಗೆ ಎಚ್ಚರಿಕೆ ನೀಡಿದ್ದ ಅವರು,ಇಲ್ಲದಿದ್ದರೆ ಹಿಂಸಾಚಾರವನ್ನು ನಡೆಸುವ ಬೆದರಿಕೆಯನ್ನೊಡ್ಡಿದ್ದರು.
ಅವರ ಭಾಷಣದ ಬೆನ್ನಲ್ಲೇ ಮೌಜುಪುರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಬಿಜೆಪಿಗೆ ಸೇರ್ಪಡೆಗೊಂಡಿರುವ ಆಪ್‌ನ ಮಾಜಿ ನಾಯಕಿ ಹಾಗೂ ಮಾಜಿ ಕೌನ್ಸಿಲರ್ ಪ್ರಿಯಾಂಕಾ ಗೌತಮ್ ಅವರನ್ನು ಕೊಂಡ್ಲಿ(ಮೀಸಲು) ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
ದಿಲ್ಲಿಯ ಮಾಜಿ ಮುಖ್ಯಮಂತ್ರಿ ಮದನಲಾಲ್ ಖುರಾನಾರ ಪುತ್ರ ಹರೀಶ್ ಖುರಾನಾ ಮೋತಿ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮೊದಲ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾರ ಪುತ್ರ ಪರ್ವೇಶ ವರ್ಮಾರನ್ನು ಹೊಸದಿಲ್ಲಿ ಕ್ಷೇತ್ರದಲ್ಲಿ ಅಪ್ ಸಂಚಾಲಕ ಅರವಿಂದ ಕೇಜ್ರಿವಾಲ್ ವಿರುದ್ಧ ಕಣಕ್ಕಿಳಿಸಲಾಗಿದೆ.
ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಐವರು ಮಹಿಳೆಯರನ್ನು ಹೆಸರಿಸಲಾಗಿದ್ದು,ಇದರೊಂದಿಗೆ ಪಕ್ಷವು ಈವರೆಗೆ ಏಳು ಮಹಿಳೆಯರನ್ನು ಕಣಕ್ಕಿಳಿಸಿದೆ.